ನವದೆಹಲಿ: ರಷ್ಯಾದಿಂದ ತೈಲ ಖರೀದಿಸಿ ಉಕ್ರೇನ್ ವಿರುದ್ಧ ಯುದ್ಧ ಮಾಡಲು ಭಾರತ ಸಹಾಯ ಮಾಡುತ್ತಿದೆ ಎಂದು ಆರೋಪಿಸುವ ಅಮೆರಿಕಾ ಕೂಡಾ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಒಳಗೊಳಗೇ ಸಹಾಯ ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಇದನ್ನೇ ಭಾರತ ಈಗ ಧೈರ್ಯವಾಗಿ ಅಮೆರಿಕಾಗೆ ಪ್ರಶ್ನೆ ಮಾಡಿದೆ.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸದೇ ಇದ್ದರೆ ಸುಂಕ ಹೆಚ್ಚಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿರುವ ಅಮೆರಿಕಾಗೆ ಭಾರತ ಈಗ ಒಂದಾದ ಮೇಲೊಂದರಂತೆ ಪೆಟ್ಟು ನೀಡುತ್ತಿದೆ. ಬೆದರಿಕೆಯ ನಡುವೆಯೂ ರಷ್ಯಾದಿಂದ ತೈಲ ಖರೀದಿಸಿರುವ ಭಾರತ ನಿಮ್ಮ ಬೆದರಿಕೆಗೆ ಸೊಪ್ಪು ಹಾಕಲ್ಲ ಎಂದಿದೆ. ಜೊತೆಗೆ ವಿದೇಶಾಂಗ ಸಚಿವಾಲಯ ಅಧಿಕೃತ ಪತ್ರ ಬರೆದು ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟ ದೇಶಗಳೂ ರಷ್ಯಾದಿಂದ ವ್ಯಾಪಾರ ಒಪ್ಪಂದ ಮಾಡುವುದು ನಮಗೆ ಗೊತ್ತಿದೆ ಎಂದಿತ್ತು.
ರಷ್ಯಾದಿಂದ ತೈಲ ಖರೀದಿಸಿದ್ದಕ್ಕೇ ಉಕ್ರೇನ್ ಯುದ್ಧಕ್ಕೆ ಹಣ ಸಹಾಯ ಮಾಡಿದಂತೆ ಎಂದು ಕೆಂಡಕಾರಿರುವ ಡೊನಾಲ್ಡ್ ಟ್ರಂಪ್ ಗೆ ಭಾರತ ಈಗ ತಕ್ಕ ಪ್ರತ್ಯುತ್ತರ ನೀಡಿದೆ. ನೀವೂ ಕೂಡಾ ಪಾಕಿಸ್ತಾನಕ್ಕೆ 1954 ರಿಂದ 2 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಮಾಡಿರುವುದು ನಮಗೆ ಗೊತ್ತಿಲ್ಲ ಎಂದುಕೊಳ್ಳಬೇಡಿ.1971 ರ ಯುದ್ಧಕ್ಕಾಗಿ ಅಮೆರಿಕಾವು ದಶಕಗಳಿಂದ ಪಾಕಿಸ್ತಾನಕ್ಕೆ ಹೇಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂಬುದನ್ನು ಚರ್ಚಿಸುವ ಹಳೆಯ ಪತ್ರಿಕೆ ತುಣುಕೊಂದನ್ನು ಭಾರತೀಯ ಸೇನೆಯ ಪೂರ್ಮ ಕಮಾಂಡ್ ಹಂಚಿಕೊಂಡಿದೆ. ಈ ಮೂಲಕ ಅಮೆರಿಕಾಗೆ ತಿರುಗೇಟು ನೀಡಿದೆ.
ರಷ್ಯಾದಿಂದ ತೈಲ ಖರೀದಿಸಿ ಉಕ್ರೇನ್ ಯುದ್ಧಕ್ಕೆ ನೆರವಾಗುತ್ತಿದೆ ಎಂದು ಬೊಬ್ಬಿರಿಯುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊನ್ನೆಯಷ್ಟೇ ಭಾರತ ವಿರೋಧಿ ಚಟುವಟಿಕೆಗಳಲ್ಲೇ ತೊಡಗಿಕೊಂಡಿರುವ ಪಾಕಿಸ್ತಾನದ ಜೊತೆ ತೈಲ ಒಪ್ಪಂದ ಮಾಡಿಕೊಂಡಿದ್ದರು. ಭಾರತ ಜಾಗತಿಕವಾಗಿ ಪಾಕಿಸ್ತಾನ ಕುಕೃತ್ಯಗಳನ್ನು ಬಯಲು ಮಾಡಿದರೂ ಆ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ ಸಾಲ ಕೊಡಿಸಲು ಇದೇ ಅಮೆರಿಕಾ ನೆರವಾಗಿತ್ತು ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಇಷ್ಟೆಲ್ಲಾ ಇದ್ದುಕೊಂಡೇ ಈಗ ಭಾರತವನ್ನು ಅಮೆರಿಕಾ ಬೆದರಿಸಲು ನೋಡುತ್ತಿರುವುದು ವಿಪರ್ಯಾಸ.