ಲಾಹೋರ್: ಪೆಹಲ್ಗಾಮ್‌ನಲ್ಲಿ ರಕ್ತಪಾತವಾದ ಬೆನ್ನಲ್ಲೇ ಭಾರತ- ಪಾಕಿಸ್ತಾನ ಯುದ್ಧದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಪಾಕಿಸ್ತಾನ ಸಂಸದರೊಬ್ಬರು ನಾಲಗೆ ಹರಿಬಿಟ್ಟಿದ್ದಾರೆ.
ಯುದ್ಧ ಕುರಿತಂತೆ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಅವರ ಬಳಿ ಮಾಧ್ಯಮದವರು ಎರಡು ದೇಶಗಳ ಮಧ್ಯೆ ಇರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿ ಹಿಂದೆ ಸರಿಯಬೇಕು ಎಂದು ಭಾವಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನಾನು ಹೇಳಿದ್ದಕ್ಕೆ ಅವರು ಹಿಂದೆ ಸರಿಯಲು ಮೋದಿ ನನ್ನ ಚಿಕ್ಕಮ್ಮನ ಮಗನೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.
ಒಂದು ವೇಳೆ ಯುದ್ಧ ನಡೆದರೆ ಗನ್ ಹೊತ್ತುಕೊಂಡು ಗಡಿಗೆ ಹೋಗುತ್ತೀರಾ ಎಂದು ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಒಂದು ವೇಳೆ ಭಾರತ- ಪಾಕಿಸ್ತಾನದ ಮಧ್ಯೆ ಯುದ್ಧ ಸಂಭವಿಸಿದರೆ ನಾನು ಇಂಗ್ಲೆಂಡಿಗೆ ಪಲಾಯನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಫ್ಜಲ್ ಖಾನ್ ಮಾರ್ವತ್ ಉತ್ತರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನಿ ರಾಜಕಾರಣಿಗಳು ಸಹ ತಮ್ಮ ಸೈನ್ಯವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಟ್ರೋಲಿಗರು ಕಾಲೆಳೆದಿದ್ದಾರೆ.
ಮಾರ್ವತ್ ಈ ಹಿಂದೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸದಸ್ಯರಾಗಿದ್ದರು. ಪಕ್ಷ ಮತ್ತು ನಾಯಕತ್ವದ ಬಗ್ಗೆ ಪದೇ ಪದೇ ಟೀಕೆ ಮಾಡುತ್ತಿದ್ದ ಕಾರಣ ಇಮ್ರಾನ್ ಖಾನ್ ಮಾರ್ವತ್ ಅವರನ್ನು ಪ್ರಮುಖ ಹುದ್ದೆಗಳಿಂದ ತೆಗೆದು ಹಾಕಿದ್ದರು.