ಇಸ್ರೇಲ್‌- ಇರಾನ್ ನಡುವೆ ಉದ್ವಿಗ್ನ ಪರಿಸ್ಥಿತಿ, ಇಸ್ರೇಲ್‌ನಲ್ಲಿ ಭಾರತೀಯರು ಎಚ್ಚರದಲ್ಲಿರಿ ಎಂದ ಭಾರತ

Sampriya

ಭಾನುವಾರ, 14 ಏಪ್ರಿಲ್ 2024 (10:06 IST)
Photo Courtesy X
ನವದೆಹಲಿ: ಇಸ್ರೇಲ್ ಮೇಲೆ ಶನಿವಾರ ತಡರಾತ್ರಿ 100ಕ್ಕೂ ಇರಾನ್ ಸ್ಫೋಟಕ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದ ಬೆನ್ನಲ್ಲೇ ಈ ದೇಶಗಳ ನಡುವಿನ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಈ ಪ್ರದೇಶದಲ್ಲಿನ ಭಾರತದ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳೊಂದಿಗೆ ನಿಕಟ ಸಂಪರ್ಕದಲ್ಲಿರುವಂತೆ ಹೇಳಿಕೊಂಡಿದೆ.

ಏಪ್ರಿಲ್ 7ರಂದು ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ  ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಕಮಾಂಡರ್‌ಗಳು ಸೇರಿದಂತೆ 7 ಮಂದಿ ಕಾವಲು ಅಧಿಕಾರಿಗಳು ಮೃತಪಟ್ಟಿದ್ದರು. ಇಸ್ರೇಲ್‌ನ ಅಪರಾಧಗಳಿಗಾಗಿ ತಕ್ಕ ಶಿಕ್ಷೆಯನ್ನು ನೀಡುವ ಶಪಥ ಮಾಡಿರುವ ಇರಾನ್ ಇದೀಗ ಪ್ರತೀಕಾರದ ದಾಳಿ ನಡೆಸುತ್ತಿದೆ.

ನಿನ್ನೆ ತಡರಾತ್ರಿ ಇಸ್ರೇಲ್‌ನ ಮೇಲೆ ಇರಾನ್ ನಡೆಸಿದೆ ಮೊದಲ ನೇರ ದಾಳಿಯಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ರಕ್ಷಣೆಗೆ ಯುದ್ಧ ನೌಕೆಗಳನ್ನು ರವಾನಿಸುವುದಾಗಿ ಅಮೆರಿಕ ಹೇಳಿದೆ.

ಇನ್ನೂ ದಾಳಿಯಿಂದ ತಪ್ಪಿಸಿಕೊಳ್ಳಲು ಇಸ್ರೇಲ್‌ನಾದ್ಯಂತ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ. ಎದುರಾಳಿಗಳು ಉಡಾಯಿಸುತ್ತಿರುವ ಸ್ಫೋಟಕ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸುವ ಪ್ರಯತ್ನದಲ್ಲಿ ಇಸ್ರೇಲ್ ನಿರತವಾಗಿದೆ.

ಇರಾನ್ ಮತ್ತು ಇಸ್ರೇಲ್‌ ನಡುವೆ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಇದು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಹೇಳಿದೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡುತ್ತಿದೆ. ಇದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಉದ್ವಿಗ್ನತೆ ತಗ್ಗಿಸುವ ಮೂಲಕ ಶಾಂತಿ ಮರಳಲು ಪ್ರಯತ್ನಿಸಬೇಕಿದೆ. ಹಿಂಸೆಯಿಂದ ಹಿಂದೆ ಸರಿದು ರಾಜತಾಂತ್ರಿಕ ಹಾದಿಗೆ ಮರಳಬೇಕು ಎಂದು ಭಾರತ ಕರೆ ನೀಡುತ್ತದೆ ಎಂದು ಹೇಳಿದೆ.

ಈ ಪ್ರದೇಶದಲ್ಲಿನ ಭಾರತದ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ’ ಎಂದು ಅದು ತಿಳಿಸಿದೆ.

ಎರಡು ದೇಶಗಳು ಉದ್ವಿಗ್ನತೆಯನ್ನು ತಪ್ಪಿಸಲು ಅತ್ಯಂತ ಸಂಯಮದಿಂದ ವರ್ತಿಸಬೇಕಿದೆ.ಈ ಪರಿಸ್ಥಿತಿಯಲ್ಲಿ ವಿವೇಚನಾಶೀಲರಾಗಿ ಯೋಚಿಸುವುದು ಬಹಳ ಮುಖ್ಯವಾಗಿದೆ. ಇದನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಅಮೆರಿಕ ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್‌ ಫ್ರಾನ್ಸಿಸ್‌ ಕೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ