ನವದೆಹಲಿ: ಭಾರತೀಯರ ಬಹಿಷ್ಕಾರದ ಬಿಸಿಯಿಂದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮದ ಆದಾಯಕ್ಕೆ ಈಗ ಭಾರೀ ಪೆಟ್ಟು ಬಿದ್ದಿದೆ.
ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಬಗ್ಗೆ ಮತ್ತು ಭಾರತೀಯರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಭಾರತ ವಿರೋಧಿ ಹೇಳಿಕೆ ನೀಡಿದ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್, ನಟ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಮಾಲ್ಡೀವ್ಸ್ ಬಹಿಷ್ಕಾರದ ಅಭಿಯಾನಕ್ಕೆ ಬೆಂಬಲ ಘೋಷಿಸಿ ಟ್ವೀಟ್ ಮಾಡಿದ್ದರು.
ಇದರ ಬೆನ್ನಲ್ಲೇ ಬೆಚ್ಚಿಬಿದ್ದ ಮಾಲ್ಡೀವ್ಸ್ ಅವಹೇಳನಕಾರಿ ಟ್ವೀಟ್ ಮಾಡಿದ ಸಚಿವರನ್ನು ವಜಾ ಮಾಡಿತ್ತು. ಆದರೂ ಭಾರತದ ಬಹಿಷ್ಕಾರ ಯೋಜನೆಯಿಂದಾಗಿ ಮಾಲ್ಡೀವ್ಸ್ ಗೆ ಬುಕಿಂಗ್ ಆಗಿದ್ದ ಅನೇಕ ಪ್ರವಾಸ ಪ್ಯಾಕೇಜ್ ಗಳು, ವಿಮಾನ ಟಿಕೆಟ್ ಗಳು ರದ್ದಾಗಿತ್ತು.
ಇದೀಗ ಭಾರತದ ಜೊತೆಗಿನ ಸಂಬಂಧ ಹಳಸಿದ ಬೆನ್ನಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ಚೀನಾಗೆ ಮಾಲ್ಡೀವ್ಸ್ ಅಧ‍್ಯಕ್ಷರ ಸಾಮಾನ್ಯ ಭೇಟಿ ಇದು ಎಂದಾಗಿದ್ದರೂ ಭಾರತದ ಜೊತೆಗೆ ಸಂಬಂಧ ಹಳಸಿರುವಾಗಲೇ ಭಾರತದ ವಿರುದ್ಧ ಕತ್ತಿಮಸೆಯುವ ಚೀನಾಗೆ ಮಾಲ್ಡೀವ್ಸ್ ಅಧ‍್ಯಕ್ಷರ ಭೇಟಿ ಕುತೂಹಲ ಮೂಡಿಸಿದೆ.