ಅಮೇರಿಕಾದಲ್ಲಿ ಭಾರತೀಯರ ಮೇಲಿನ ದ್ವೇಷಕ್ಕೆ ತುಪ್ಪ ಸುರಿಯುವ ಯತ್ನ( ವಿಡಿಯೋ)

ಮಂಗಳವಾರ, 7 ಮಾರ್ಚ್ 2017 (16:01 IST)
ಅಮೇರಿಕದಲ್ಲಿ ಭಾರತೀಯ ಮೂಲದವರ ಮೇಲಿನ ದಾಳಿಗಳು ಆತಂಕವನ್ನು ಸೃಷ್ಟಿಸಿದ್ದು,  ಅಮೇರಿಕದ ವಲಸೆ ವಿರೋಧಿ ವೆಬ್‌ಸೈಟ್‌ವೊಂದು ಈ ದ್ವೇಷಕ್ಕೆ ತುಪ್ಪ ಸುರಿಯುವ ಯತ್ನ ಮಾಡಿದೆ. ಈ ಮೂಲಕ ಅಲ್ಲಿನ ಭಾರತೀಯ ಸಮುದಾಯದವರಿಗೆ ಎಚ್ಚರಿಕೆಯ ಕರೆಗಂಟೆಯನ್ನು  ನೀಡಿದೆ.

ಸೇವ್ ಅಮೆರಿಕನ್ ಐಟಿ ಜಾಬ್ಸ್ ಎಂಬ ಫೇಸ್ ಬುಕ್ ಖಾತೆಯಲ್ಲಿ  ಅಪ್ಲೋಡ್ ಮಾಡಲಾಗಿರುವ 'Welcome to Columbus Ohio Suburbs -- Let's Take a Walk to Indian Park'('ಕೊಲಂಬಸ್ ಓಹಿಯೋ ಉಪನಗರಗಳಿಗೆ ಸ್ವಾಗತ - ಭಾರತೀಯ ಪಾರ್ಕ್‌ನಲ್ಲೊಂದು ವಾಕ್  ಹೋಗೋಣ') ಎಂಬ ಶೀರ್ಷಿಕೆಯ 2:49 ನಿಮಿಷದ ಈ ವಿಡಿಯೋದಲ್ಲಿ ಮಧ್ಯಪಶ್ಚಿಮದಲ್ಲಿ  ಭಾರತೀಯರು ವಿಶ್ರಾಂತಿ ಪಡೆಯುತ್ತಿರುವುದನ್ನು, ಆಟವಾಡುತ್ತಿರುವುದನ್ನು, ಒಟ್ಟಿನಲ್ಲಿ ಭಾರತೀಯರು ಐಷಾರಾಮಿ ಮತ್ತು ಮೋಜಿನ ಜೀವನವನ್ನು ನಡೆಸುತ್ತಿರುವುದನ್ನು ತೋರಿಸಲಾಗಿದೆ.
 
ಅಮೇರಿಕನ್ನರಿಗೆ ಸಿಗಬೇಕಾದ ಕೆಲಸಗಳನ್ನು ಕಿತ್ತುಕೊಂಡು ಭಾರತೀಯರು ತಾವು ಶ್ರೀಮಂತಿಕೆಯ ಜೀವನವನ್ನು ನಡೆಸುತ್ತಿದ್ದಾರೆ. ಇದರ ವಿರುದ್ಧ ಹೋರಾಡಲೇ ಬೇಕು ಎಂದು ಕೊಲಂಬಸ್ ಪಾರ್ಕ್‌ನಲ್ಲಿ ವಾಕ್ ಮಾಡುತ್ತಾ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸುತ್ತಿರುವ ವ್ಯಕ್ತಿ ಕರೆ ನೀಡುತ್ತಿದ್ದಾನೆ.
 
ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ನೀತಿ ಬಗ್ಗೆ ಘೋಷಿಸಿದ ಬೆನ್ನಲ್ಲೇ ಭಾರತೀಯರ ಮೇಲೆ ಅಮೇರಿಕನ್ನರ ದಾಳಿ ಪ್ರಾರಂಭವಾಗಿದೆ. ಕಳೆದ 15 ದಿನಗಳಲ್ಲಿ ಮೂವರು ಭಾರತೀಯರಿಗೆ ಗುಂಡು ಹಾರಿಸಲಾಗಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಹತ್ಯೆ ನಡೆಯುವಾಗ ನಮ್ಮ ದೇಶವನ್ನು ಬಿಟ್ಟು ತೊಲಗಿ ಎಂದು ದಾಳಿಕೋರರು ಕೂಗಿರುವುದು ಇಲ್ಲಿ ಗಮನಾರ್ಹ.

ಅಮೇರಿಕಾದಲ್ಲಿ ಭಾರತೀಯರ ಮೇಲಿನ ದ್ವೇಷಕ್ಕೆ ತುಪ್ಪ ಸುರಿಯುವ ಯತ್ನ( ವಿಡಿಯೋ)
 

ವೆಬ್ದುನಿಯಾವನ್ನು ಓದಿ