ರಷ್ಯಾ, ಉಕ್ರೇನ್‌ ಮಧ್ಯೆ ಸಂಧಾನ?

ಗುರುವಾರ, 18 ಆಗಸ್ಟ್ 2022 (13:55 IST)
ಮಾಸ್ಕೋ : ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ 176 ದಿನ ಕಳೆದಿದೆ. ಈಗ ಈ ಯುದ್ಧ ನಿಲ್ಲಿಸಲು ಭಾರತ ಸಂಧಾನ ಮಾತುಕತೆ ನಡೆಸುತ್ತಾ ಎಂಬ ಪ್ರಶ್ನೆ ಎದ್ದಿದೆ.
 
ಹೌದು. ಈ ವರ್ಷದ ಫೆಬ್ರವರಿ 20ರಿಂದ ಆರಂಭಗೊಂಡ ಯುದ್ಧವನ್ನು ನಿಲ್ಲಿಸಲು ಹಲವು ದೇಶಗಳು ಪ್ರಯತ್ನ ಮಾಡುತ್ತಿದ್ದರೂ ರಷ್ಯಾ ಬಗ್ಗುತ್ತಿಲ್ಲ. ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾಗೆ ಭೇಟಿ ನೀಡಿದ್ದರಿಂದ ಭಾರತ ಸಂಧಾನ ಮಾತುಕತೆ ನಡೆಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಅಜಿತ್ ದೋವಲ್ ಅವರು ರಷ್ಯಾದ ಭದ್ರತಾ ಸಲಹೆಗಾರ ನಿಕೊಲಾಯ್ ಪಟ್ರುಶೆವ್ ಜೊತೆ ಮಾತುಕತೆ ನಡೆಸಲಿದ್ದಾರೆ. ನಿಕೊಲಾಯ್ ಪಟ್ರುಶೆವ್ ಅಲ್ಲದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಲ್ಲದೇ ಹಲವು ನಾಯಕರ ಜೊತೆ ಉಕ್ರೇನ್ ವಿಚಾರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಎರಡು ದೇಶಗಳ ಮಧ್ಯೆ ಆರಂಭವಾದ ಯುದ್ಧದಿಂದ ವಿಶ್ವದೆಲ್ಲೆಡೆ ಸಮಸ್ಯೆ ಸೃಷ್ಟಿಯಾಗಿದ್ದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಯುರೋಪಿಯನ್ ದೇಶಗಳಲ್ಲಿ ಹಣದುಬ್ಬರ ಭಾರೀ ಏರಿಕೆಯಾಗಿದೆ. ಹೀಗಾಗಿ ಈ ರಾಷ್ಟ್ರಗಳು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮೇಲೆ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರುತ್ತಿವೆ. 

ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೆರಿಕ ದೇಶಗಳು ರಷ್ಯಾ ಜೊತೆ ಮಾತುಕತೆ  ನಡೆಸಿ ಯುದ್ಧ ನಿಲ್ಲಿಸುವಂತೆ ಮನವೊಲಿಸಿ ಎಂದು ಭಾರತದ ಜೊತೆ ಕೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಜಿತ್ ದೋವಲ್ ರಷ್ಯಾ ಪ್ರವಾಸ ಭಾರೀ ಮಹತ್ವ ಪಡೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ