ಪಾಕಿಸ್ತಾನ- ಚೀನಾ ನಡುವೆ ನೇರ ರೈಲು ಸಂಪರ್ಕ ಆರಂಭ

ಗುರುವಾರ, 1 ಡಿಸೆಂಬರ್ 2016 (19:34 IST)
ಚೀನಾ ಮತ್ತು ಪಾಕಿಸ್ತಾನದ ನಡುವೆ ನೇರ ರೈಲು ಸಂಪರ್ಕ ಆರಂಭವಾಗಿದ್ದು, ಇಂದು ಚೀನಾದ ಯುನಾನ್ ಪ್ರಾಂತ್ಯದಿಂದ ಹೊರಟ ರೈಲು ಕರಾಚಿಯನ್ನು ತಲುಪಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
 
ಚೀನಾದ ಆಗ್ನೇಯ ಭಾಗದಲ್ಲಿರುವ ಯುನಾನ್ ಪ್ರಾಂತ್ಯದ ಕುನ್ಮಿಂಗ್ ನಗರದಿಂದ 500 ಟನ್ ಸರಕು ಹೊತ್ತ ರೈಲು, ಪಾಕಿಸ್ತಾನದ ಕರಾಚಿಯನ್ನು ನಿಗದಿತ ಅವಧಿಯಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ. 
 
ಚೀನಾ ಮತ್ತು ಪಾಕಿಸ್ತಾನದ ನಡುವೆ ಕುನ್ಮಿಂಗ್-ಕರಾಚಿ ನೇರ ರೈಲು ಸಂಪರ್ಕ ಆರಂಭದಿಂದಾಗಿ ಶೇ.50 ರಷ್ಟು ಸಾಗಾಣೆ ವೆಚ್ಚ ಕಡಿತವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
46 ಬಿಲಿಯನ್ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಪ್ರೊಜೆಕ್ಟ್‌ನ ಒಂದು ಭಾಗವೇ ಕುನ್ಮಿಂಗ್-ಕರಾಚಿ ನಡುವಿನ ರೈಲು ಸಂಪರ್ಕವಾಗಿದೆ ಎಂದು ಚೀನಾ ಪತ್ರಿಕೆ ವರದಿ ಮಾಡಿದೆ. 
 
ಉಭಯ ದೇಶಗಳ ನಡುವೆ ವಾಣಿಜ್ಯ ವಹಿವಾಟು ಆರಂಭವಾಗಿದ್ದು, ಚೀನಾ ಪಾಕಿಸ್ತಾನದ ಮೂಲಕ ಯುರೋಪ್ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ಸರಕು ಸಾಗಣೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ