ಸ್ವತಃ ಗತಿಯಿಲ್ಲದಿದ್ದರೂ ಮಾಲ್ಡೀವ್ಸ್ ಗೆ ಸಹಾಯ ಮಾಡುತ್ತೇವೆ ಎಂದ ಪಾಕ್

Krishnaveni K

ಸೋಮವಾರ, 5 ಫೆಬ್ರವರಿ 2024 (10:15 IST)
ಇಸ್ಲಾಮಾಬಾದ್: ತನಗೇ ಗತಿಯಿಲ್ಲದಿದ್ದರೂ ಭಾರತದೊಂದಿಗೆ ಸಂಬಂಧ ಹಳಸಿಕೊಂಡಿರುವ ಮಾಲ್ಡೀವ್ಸ್ ಗೆ ತಾನು ಸಹಾಯ ಮಾಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಯನ್ನು ಟೀಕಿಸಿದ ಬಳಿಕ ಭಾರತ-ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿತ್ತು. ಅಲ್ಲಿನ ಸಚಿವರಿಬ್ಬರು ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಸಿಟ್ಟಿಗೆದ್ದ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ನಡೆಸಿದ್ದರು. ಪರಿಣಾಮ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಮಾಲ್ಡೀವ್ಸ್ ಗೆ ಭಾರತೀಯ ಪ್ರವಾಸಿಗರು ಪ್ರವಾಸ ಕ್ಯಾನ್ಸಲ್ ಮಾಡಿ ತೀವ್ರ ನಷ್ಟ ತಂದಿದ್ದರು. ಇದಾದ ಬಳಿಕ ಮಾಲ್ಡೀವ್ಸ್ ಚೀನಾ ಜೊತೆ ಕೈ ಜೋಡಿಸಿತ್ತು.

ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ ಬೆನ್ನಲ್ಲೇ ಭಾರತ ಸರ್ಕಾರ ಮಾಲ್ಡೀವ್ಸ್ ಗೆ ನೀಡುತ್ತಿದ್ದ ಸಹಾಯ ಧನ ಕಡಿತಗೊಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.22 ರಷ್ಟು ಸಹಾಯಧನ ಕಡಿತ ಮಾಡಿದೆ.

ಪಾಕಿಸ್ತಾನ ನೆರವಿನ ಘೋಷಣೆ
ಭಾರತ ಸರ್ಕಾರದಿಂದ ನೆರವು ಕಡಿತವಾಗುತ್ತಿದ್ದಂತೇ ಇತ್ತ ಪಾಕಿಸ್ತಾನ ತಾನು ಮಾಲ್ಡೀವ್ಸ್ ಸಹಾಯಕ್ಕೆ ಸಿದ್ಧ ಎಂದು ಘೋಷಿಸಿದೆ. ಸ್ವತಃ ಪಾಕಿಸ್ತಾನವೇ ಆರ್ಥಿಕ ಸಂಕಷ್ಟದಲ್ಲಿದ್ದು, ಚೀನಾದಂತಹ ದೈತ್ಯ ರಾಷ್ಟ್ರಗಳಿಂದ ಹಣಕ್ಕಾಗಿ ಬೇಡಿಕೊಳ್ಳುವ ಪರಿಸ್ಥಿತಿಯಿದೆ. ಈ ನಡುವೆ ಭಾರತದ ಜೊತೆ ಸಂಬಂಧ ಹಳಸಿದ ಬೆನ್ನಲ್ಲೇ ಮಾಲ್ಡೀವ್ಸ್ ಗೆ ಸಹಾಯ ಮಾಡುವ ಘೋಷಣೆ ಮಾಡಿರುವುದು ಹಾಸ್ಯಾಸ್ಪದವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ