ಲಕ್ಷದ್ವೀಪವನ್ನು ಮಾಲ್ಡೀವ್ಸ್ ಮೀರಿಸುವ ಹಾಗೆ ಮಾಡಲು ಹೊರಟ ಮೋದಿ

Krishnaveni K

ಗುರುವಾರ, 1 ಫೆಬ್ರವರಿ 2024 (14:11 IST)
Photo Courtesy: Twitter
ನವದೆಹಲಿ: ಈ ಬಾರಿ ಬಜೆಟ್ ನಲ್ಲಿ ಪ್ರವಾಸೋದ್ಯಕ್ಕೆ ಅದರಲ್ಲೂ ಲಕ್ಷದ್ವೀಪ ಟೂರಿಸಂಗೆ ಮೋದಿ ಸರ್ಕಾರ ಹಣ ಮೀಸಲಿಡಲಿದೆ ಎಂದು ಎಲ್ಲರ ನಿರೀಕ್ಷೆಯಾಗಿತ್ತು.  ಆ ನಿರೀಕ್ಷೆ ನಿಜವಾಗಿದೆ.

ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅನುದಾನ ಮೀಸಲಿಡಲಾಗಿದೆ. ಇಲ್ಲಿಗೆ ಪ್ರವಾಸಿಗರನ್ನು ಸೆಳೆಯಲು ಮೂಲಸೌಕರ್ಯಾಭಿವೃದ್ಧಿ ಮಾಡಲು ಮುಂದಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಾಲ್ಡೀವ್ಸ್ ಗೆ ಸೆಡ್ಡು ಹೊಡೆಯಲಿರುವ ಲಕ್ಷದ್ವೀಪ
ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಮೂಲಕ ಮೋದಿ ಸರ್ಕಾರ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದೆ. ಇತ್ತೀಚೆಗೆ ಮೋದಿ ಲಕ್ಷದ್ವೀಪ ಪ್ರವಾಸವನ್ನು ಅಣಕಿಸಿದ್ದ ಮಾಲ್ಡೀವ್ಸ್ ತಕ್ಕ ಉತ್ತರ ಕೊಡುವ ಗುರಿಯಿದೆ. ಜೊತೆಗೆ ಇಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿಯಿದೆ.

ಪ್ರಧಾನಿ ಲಕ್ಷದ್ವೀಪ ಭೇಟಿ ಮಾಡಿದ ಬಳಿಕ ಎಷ್ಟೋ ಮಂದಿಗೆ ಇಲ್ಲಿಗೆ ಪ್ರವಾಸ ಕೈಗೊಳ‍್ಳಲು ಆಸಕ್ತಿ ತೋರಿಸಿದ್ದಾರೆ. ಲಕ್ಷದ್ವೀಪ ಪ್ರವಾಸಕ್ಕೆ ವಿಮಾನ ಬುಕಿಂಗ್ ಕೂಡಾ ಹೆಚ್ಚಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಮೂಲಸೌಕರ್ಯ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ಟಾಟಾ ಸಂಸ್ಥೆ ಈಗಷ್ಟೇ ಐಷಾರಾಮಿ ಹೋಟೆಲ್ ಆರಂಭಿಸಲು ಯೋಜನೆ ಹಾಕಿಕೊಂಡಿದೆ. ವಿಮಾನ ಅಥವಾ ಹಡಗಿನ ಮೂಲಕ ಪ್ರಯಾಣಿಸುವುದಿದ್ದರೂ ಕೇರಳದ ಕೊಚ್ಚಿಯನ್ನು ಮಾತ್ರ ಅವಲಂಬಿಸಬೇಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಲ್ಲಿಗೆ ಹೆಚ್ಚು ಪ್ರಯಾಣ ವ್ಯವಸ್ಥೆ, ಉಳಕೊಳ್ಳುವ ವ್ಯವಸ್ಥೆ ಇತ್ಯಾದಿ ಮಾಡಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಲ್ಲಿ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ. ಕೇಂದ್ರದ ಈ ಗುರಿ ಯಶಸ್ವಿಯಾದರೆ ಮಾಲ್ಡೀವ್ಸ್ ಗೆ ದೊಡ್ಡ ಹೊಡೆತ ಬೀಳುವುದು ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ