ಬೀಜಿಂಗ್ : ಸುಮಾರು 2 ವರ್ಷ ಕೋವಿಡ್ನ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿದ ಬಳಿಕ ಇದೀಗ ಚೀನಾದ ಹಾಂಕಾಂಗ್ನಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿದೆ.
ಸುಮಾರು 2 ವರ್ಷಗಳ ಬಳಿಕ ಸರ್ಕಾರದ ನೀತಿಗಳ ವಿರುದ್ಧ ಹಾಂಕಾಂಗ್ನಲ್ಲಿ ಭಾನುವಾರ ಮೊದಲ ಬಾರಿ ಪ್ರತಿಭಟನೆ ನಡೆದಿದೆ. ಆದರೆ ಪ್ರತಿಭಟನಾಕಾರರ ಸಂಖ್ಯೆಯ ಮೇಲೆ ನಿಯಂತ್ರಣವಿಡಲು ಪ್ರತಿಯೊಬ್ಬರಿಗೂ ಸಂಖ್ಯೆಯ ಟ್ಯಾಗ್ಗಳನ್ನು ನೀಡಲಾಗಿದೆ. ಮಾತ್ರವಲ್ಲದೇ ಇತರ ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಪ್ರತಿಭಟನೆಯನ್ನು ನಡೆಸಲಾಗಿದೆ.
ಭಾನುವಾರ ನಡೆದ ಪ್ರತಿಭಟನೆ ಭೂಸುಧಾರಣಾ ಯೋಜನೆಯ ವಿರುದ್ಧವಾಗಿತ್ತು. ಕೋವಿಡ್ ಕ್ರಮಗಳನ್ನು ತೆಗೆದುಹಾಕಿದ ನಂತರ ಸರ್ಕಾರದ ಯೋಜನೆಯ ವಿರುದ್ಧ ನಡೆಸಲಾದ ಅಧಿಕೃತ ಪ್ರತಿಭಟನೆ ಇದಾಗಿದೆ.
ವರದಿಗಳ ಪ್ರಕಾರ ಪ್ರತಿಭಟನೆಯಲ್ಲಿ ಭಾಗವಹಿಸಲು ಕೇವಲ 100 ಜನರಿಗೆ ಮಾತ್ರವೇ ಅವಕಾಶವಿದ್ದು, ಕಟ್ಟುನಿಟ್ಟಾದ ಷರತ್ತುಗಳನ್ನೂ ಅನುಸರಿಸಲು ಪೊಲೀಸರು ಎಚ್ಚರಿಕೆ ನೀಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಕುತ್ತಿಗೆಗೆ ಸಂಖ್ಯೆಯ ಟ್ಯಾಗ್ಗಳನ್ನು ಧರಿಸುವಂತೆ ಮಾಡಲಾಗಿತ್ತು. ಮಾಧ್ಯಮದವರನ್ನು ಪ್ರತಿಭಟನಾ ಮೆರವಣಿಗೆಯಿಂದ ಪ್ರತ್ಯೇಕಿಸಲಾಗಿತ್ತು ಎನ್ನಲಾಗಿದೆ.