ನವದೆಹಲಿ : ಮಾರ್ಚ್ 19 ರಂದು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಎದುರು ಖಲಿಸ್ತಾನಿ ಬೆಂಬಲಿಗರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಸಿ, ಯುಎಪಿಎ ಮತ್ತು ಪಿಡಿಪಿಪಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ದೆಹಲಿ ಪೊಲೀಸರಿಗೆ ಸೂಚಿಸಿದ್ದು, ಈ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ದೆಹಲಿ ಪೊಲೀಸರ ವಿಶೇಷ ತಂಡ ಈ ಪ್ರಕರಣದ ತನಿಖೆಯನ್ನು ಆರಂಭಿಸಿದೆ. ವಿದೇಶದಲ್ಲಿ ಭಾರತೀಯ ರಾಷ್ಟ್ರೀಯತೆಯನ್ನು ಹೊಂದಿರುವ ಕೆಲ ವ್ಯಕ್ತಿಗಳೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿರುವ ಕಾರಣ ವಿಶೇಷ ತಂಡ ತನಿಖೆಯನ್ನು ಪ್ರಾರಂಭಿಸಿದೆ.
ಮಾರ್ಚ್ 19ರಂದು ಖಲಿಸ್ತಾನಿ ಬೆಂಬಲಿಗರ ಗುಂಪು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಬಳಿ ಪ್ರತ್ಯೇಕತಾವಾದಿ ನಾಯಕ ಅಮೃತ್ಪಾಲ್ ಸಿಂಗ್ನ ಪರ ಪೋಸ್ಟರ್ ಹಾಗೂ ಧ್ವಜಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೋವೊಂದರಲ್ಲಿ ಕಿಡಿಗೇಡಿಗಳು ಹೈಕಮಿಷನ್ನ ಗೋಡೆಯನ್ನು ಹತ್ತಿ ಭಾರತದ ಧ್ವಜವನ್ನು ಉರುಳಿಸಿರುವುದು ಕಂಡುಬಂದಿದೆ.