ಬೀಜಿಂಗ್ : ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಪ್ರಾರಂಭಿಸಿ 3 ವಾರಗಳು ಕಳೆದಿವೆ.
ಇಂದಿಗೂ ಶಾಂಘೈ ನಗರದ ಜನರು ಕಳೆದ 3 ವಾರಗಳಿಂದ ತಮ್ಮ ಮನೆಗಳಿಂದ ಹೊರ ಇಣುಕಲೂ ಸಾಧ್ಯವಾಗುತ್ತಿಲ್ಲ. ಇದೀಗ ನಗರದ ಎರಡೂವರೆ ಕೋಟಿ ಜನರು ಆಹಾರ, ಔಷಧಗಳಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಶಾಂಘೈ ನಗದ ಕಟ್ಟುನಿಟ್ಟಿನ ಲಾಕ್ಡೌನ್ ನಡುವೆ ನಗರದ ನಿವಾಸಿಗಳು ತಮ್ಮ ಮನೆಗಳಿಂದ ಕಿರುಚಾಟ, ಅರಚಾಟಗಳನ್ನು ಪ್ರಾರಂಭಿಸಿದ್ದಾರೆ. ಜನರು ತಮ್ಮ ಕಿಟಕಿಗಳಿಂದ ಕಿರುಚುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜನರ ಆಕ್ರಂದನವೇ ಅವರ ಕಷ್ಟದ ಕ್ಷಣಗಳನ್ನು ಬಯಲುಮಾಡುತ್ತಿದೆ.
ಟ್ವಿಟ್ಟರ್ ಬಳಕೆದಾರ ಪ್ಯಾಟ್ರಿಕ್ ಮ್ಯಾಡ್ರಿಡ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಶಾಂಘೈ ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್ಗಳಿಂದ ಕಿರುಚಾಡುವ ಸನ್ನಿವೇಶವನ್ನು ಕಾಣಬಹುದು.
ವೀಡಿಯೋ ಬಗ್ಗೆ ವಿವರಿಸಿರುವ ಮ್ಯಾಡ್ರಿಡ್, ಇದು ನನ್ನ ಆತ್ಮೀಯ ಸ್ನೇಹಿತನ ತಂದೆ ತೆಗೆದಿರುವ ವೀಡಿಯೋ. ಶಾಂಘೈ ಜನರ ಕಷ್ಟದ ಸತ್ಯಾಸತ್ಯತೆಯನ್ನು ಅವರು ಸೆರೆಹಿಡಿದಿದ್ದಾರೆ.
ಲಾಕ್ಡೌನ್ ಪ್ರಾರಂಭವಾಗಿ ವಾರಗಳ ಬಳಿಕ ಅಲ್ಲಿನ ಜನರು ತಮ್ಮ ಕಿಟಕಿಗಳ ಹೊರಗೆ ಕಿರುಚಾಡುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ತಮ್ಮ ಅಪಾರ್ಟ್ಮೆಂಟ್ ತೊರೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.