ಮಾಸ್ಕೋ : ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ ತಿಂಗಳಾಗುತ್ತಿದೆ. ಈ ನಡುವೆಯೇ ರಷ್ಯಾ ಹೊಸ ಪರಮಾಣು ಸಾಮರ್ಥ್ಯದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ.
ಇದು ಭೂಮಿಯ ಯಾವುದೇ ಭಾಗವನ್ನೂ ತಲುಪುವ ಸಾಮರ್ಥ್ಯ ಹೊಂದಿದೆ. ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗಿರುವ ಸರ್ಮ್ಯಾಟ್ ಕ್ಷಿಪಣಿಯನ್ನು ರಷ್ಯಾದ ಪ್ಲೆಸೆಟ್ಸ್ಕ್ ನಿಂದ ಇದೇ ಮೊದಲ ಬಾರಿಗೆ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದೆ.
ಇದು ಸುಮಾರು 6,000 ಕಿ.ಮೀ ದೂರದ ಕಮ್ಚಾಟ್ಕಾ ದ್ವೀಪದಲ್ಲಿನ ಗುರಿಯನ್ನು ಹೊಡೆದಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ. 200 ಟನ್ ತೂಗುವ ಸರ್ಮ್ಯಾಟ್ ಕ್ಷಿಪಣಿ ಅಸಂಖ್ಯಾತ ಸಿಡಿತಲೆಗಳನ್ನು ಹೊತ್ತೊಯ್ಯುವ ಹಾಗೂ ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಈ ಹೊಸ ಕ್ಷಿಪಣಿ ಅತ್ಯುನ್ನತ ಯುದ್ಧತಂತ್ರ ಹಾಗೂ ತಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಕ್ಷಿಪಣಿ-ವಿರೋಧಿ ರಕ್ಷಣೆಯ ಎಲ್ಲಾ ಆಧುನಿಕ ವಿಧಾನಗಳನ್ನು ಜಯಿಸಲು ಸಮರ್ಥವಾಗಿದೆ. ಜಗತ್ತಿನಲ್ಲಿ ಇಂತಹ ಸಾಮರ್ಥ್ಯದ ಕ್ಷಿಪಣಿಯನ್ನು ಎಲ್ಲಿಯೂ ಮಾಡಲಾಗಿಲ್ಲ, ಮಾಡಿದರೂ ದೀರ್ಘ ಸಮಯದ ವರೆಗೆ ಯಾರಿಂದಲೂ ತಯಾರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.