ಫ್ಲೋರಿಡಾ: ಬಾಹ್ಯಾಕಾಶದಿಂದ ಕೆಳಗೆ ನೋಡಿದರೆ ಭಾರತ ಹೇಗೆ ಕಾಣಿಸುತ್ತದೆ? ಈ ಪ್ರಶ್ನೆಗೆ ಮೊನ್ನೆಯಷ್ಟೇ ಬಾಹ್ಯಾಕಾಶ ಯಾತ್ರೆ ಮುಗಿಸಿ ಭೂಮಿಗೆ ಬಂದ ಭಾರತೀಯ ಮೂಲದ ಅಮೆರಿಕಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
9 ದಿನಗಳಿಗೆಂದು ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ವಿಲಿಯಮ್ಸ್ ತಾಂತ್ರಿಕ ದೋಷಗಳಿಂದಾಗಿ 9 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯುವಂತಾಯಿತು. ಈ ವೇಳೆ ಅವರು ಸಾಕಷ್ಟು ಬಾರಿ ಭೂಮಿಗೆ ಸುತ್ತು ಹಾಕಿದ್ದಾರೆ. ಮೊನ್ನೆಯಷ್ಟೇ ಭೂಮಿಗೆ ಬಂದಿಳಿದ ಅವರು ಈಗ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ನಡುವೆ ಪತ್ರಕರ್ತರೊಬ್ಬರು ಅವರನ್ನು ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅವರು ನೀಡಿದ ಪ್ರತಿಕ್ರಿಯೆ ಅದ್ಭುತವಾಗಿತ್ತು. ಭಾರತ ಅದ್ಭುತ, ಅದ್ಭುತವಾಗಿ ಕಾಣಿಸುತ್ತದೆ ಎಂದಿದ್ದಾರೆ.
ಪ್ರತೀ ಬಾರಿ ನಾವು ಹಿಮಾಲಯದ ಮೇಲೆ ಹೋಗುವಾಗ ಅದ್ಬುತ ದೃಶ್ಯಗಳನ್ನು ಕಾಣುತ್ತಿದ್ದೆವು. ಭಾರತದ ಮೇಲೆ ಹಾಲ್ನೊರೆಯ ಹರಿವು ಮತ್ತು ಏರಿಳಿತಗಳಿದ್ದಂತೆ ಕಾಣುತ್ತದೆ. ಪ್ರತೀ ಬಾರಿ ಹಿಮಾಲಯದ ಮೇಲೆ ಹಾದು ಹೋಗುವಾಗ ಸುಂದರ ದೃಶ್ಯವನ್ನು ಬುಚ್ ವಿಲ್ಮೋರ್ ಫೋಟೋ ತೆಗೆದುಕೊಂಡಿದ್ದರು ಎಂದಿದ್ದಾರೆ.
ಇನ್ನು ಭಾರತಕ್ಕೆ ಖಂಡಿತವಾಗಿ ಶೀಘ್ರದಲ್ಲೇ ಭೇಟಿ ನೀಡುತ್ತೇನೆ ಎಂದಿದ್ದಾರೆ. ಭಾರತವು ಒಂದು ಅದ್ಭುತ ದೇಶ. ಭಾರತವೂ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧವಾಗಿದೆ. ಇದರಲ್ಲಿ ಭಾಗಿಯಾಗುವ ಮೂಲಕ ನಾವೂ ಭಾರತಕ್ಕೆ ಸಹಾಯ ಮಾಡಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡಿ ನಮ್ಮ ಅನುಭವ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.