ತಾಲಿಬಾನ್ : ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ!
ಸೋಮವಾರ, 28 ಮಾರ್ಚ್ 2022 (13:28 IST)
ಕಾಬೂಲ್ : ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಇಲ್ಲಿಗೆ 9 ತಿಂಗಳುಗಳೇ ಕಳೆದಿವೆ.
ತಾಲಿಬಾನ್ ಆಡಳಿತ ಪ್ರಾರಂಭವಾದಾಗಿನಿಂದ ಒಂದೆಡೆ ಜನರು ಹಸಿವಿನಿಂದ ಒದ್ದಾಡುವಂತಾಗಿದ್ದರೆ, ಮತ್ತೊಂದೆಡೆ ತಾಲಿಬಾನ್ ಆದೇಶಗಳಿಂದಾಗಿ ಅಲ್ಲಿನ ಮಹಿಳೆಯರ ಜೀವನ ಕಷ್ಟಕರವಾಗುತ್ತಲೇ ಇದೆ.
ಇದೀಗ ತಾಲಿಬಾನ್ನ ಹೊಸ ಆದೇಶ ಕಾಬೂಲ್ನಲ್ಲಿ ಮಹಿಳೆಯರು ಪುರುಷರೊಂದಿಗೆ ಪಾರ್ಕ್ ತೆರಳಲು ನಿಷೇಧಿಸಿದೆ. ಇದರ ಪ್ರಕಾರ ಮಹಿಳೆಯರು ಪುರಷರೊಂದಿಗೆ ಒಂದೇ ದಿನ ಪಾರ್ಕ್ ತೆರಳಲು ಸಾಧ್ಯವಾಗುವುದಿಲ್ಲ.
ತಾಲಿಬಾನ್ ಕಾಬೂಲ್ನಲ್ಲಿ ಮಹಿಳೆಯರಿಗೆ ವಾರದಲ್ಲಿ 3 ದಿನಗಳ ಕಾಲ ಪಾರ್ಕ್ ಪ್ರವೇಶಿಸಲು ಅವಕಾಶ ನೀಡಿದೆ. ಭಾನುವಾರ, ಸೋಮವಾರ ಹಾಗೂ ಮಂಗಳವಾರ ಮಹಿಳೆಯರಿಗೆ ಪಾರ್ಕ್ಗಳಲ್ಲಿ ಪ್ರವೇಶ ನೀಡಿದರೆ ವಾರದ ಉಳಿದ ದಿನಗಳು ಕೇವಲ ಪುರುಷರು ಪ್ರವೇಶಿಸಬಹುದು.
ಒಂದು ವೇಳೆ ಮಹಿಳೆಯರು ಪುರುಷರಿಗೆ ನಿಗದಿ ಪಡಿಸಿರುವ ದಿನಗಳಲ್ಲಿ ಪಾರ್ಕ್ ಪ್ರವೇಶಿಸಿದ್ದಲ್ಲಿ ಅವರಿಗೆ ಕಠಿಣ ಕ್ರಮವನ್ನು ವಿಧಿಸಲಾಗುವುದು ಎಂದು ತಾಲಿಬಾನ್ ಸಂಸ್ಕೃತಿ ಸಚಿವಾಲಯ ಎಚ್ಚರಿಸಿದೆ.
ಜೊತೆಗೆ ಮಹಿಳೆಯರು ಪಾರ್ಕ್ ಪ್ರವೇಶಿಸುವಾಗ ಕಡ್ಡಾಯವಾಗಿ ಹಿಜಬ್ ಧರಿಸಬೇಕು ಎಂದು ಆದೇಶಿಸಿದೆ.