ಮಾಸ್ಕೋ: ರಷ್ಯಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಗುಂಡಿನ ದಾಳಿಗೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ರಷ್ಯಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದಲ್ಲೇ ಈ ಘಟನೆ ನಡೆದಿದೆ. ಸಂಗೀತ ಕಾರ್ಯಕ್ರಮಕ್ಕೆ ನುಗ್ಗಿದ ಐವರು ಭಯೋತ್ಪಾದಕರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಇತ್ತೀಚೆಗಿನ ದಿನಗಳಲ್ಲಿ ಇದು ಭೀಕರ ಭಯೋತ್ಪಾದಕ ದಾಳಿಯಾಗಿದೆ.
ಮಹಿಳೆಯರು, ಮಕ್ಕಳು ಎನ್ನುವುದನ್ನು ನೋಡದೇ ಮನಸೋ ಇಚ್ಛೆ ಉಗ್ರರು ಸಿಕ್ಕ ಸಿಕ್ಕಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಐಸಿಸ್ ಉಗ್ರರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾಗೆ ಇಂತಹದ್ದೊಂದು ದಾಳಿ ಬಗ್ಗೆ ಅಮೆರಿಕಾ ಎಚ್ಚರಿಕೆ ನೀಡಿತ್ತು.
ಗುಂಡಿನ ದಾಳಿಗೊಳಗಾದ ಕಟ್ಟಡ ಬೆಂಕಿಗೆ ಆಹುತಿಯಾಗಿದೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ‍್ಯತೆಯಿದೆ. ಧಾರುಣ ಘಟನೆ ಬೆನ್ನಲ್ಲೇ ರಷ್ಯಾ ಅಧ‍್ಯಕ್ಷ ಪುಟಿನ್ ಗೆ ಕರೆ ಮಾಡಿರುವ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.