ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರದ ವಾಸನೆ

ಭಾನುವಾರ, 4 ಜುಲೈ 2021 (09:24 IST)
ಪ್ಯಾರೀಸ್: ಭಾರತದ ವಾಯಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ 2016 ಬಹುಕೋಟಿ ಮೊತ್ತದ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಒಪ್ಪಂದದಲ್ಲಿ ಅಕ್ರಮ-ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳೂ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.





ಈ ನಡುವೆ ಈ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳು ದಿಢೀರೆಂದು ರಕ್ಷಣಾ ಇಲಾಖೆ ಕಚೇರಿಯಿಂದಲೇ ಕಾಣೆಯಾದದ್ದು ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಆದರೆ, ಇದೀಗ ನಡೆದಿರುವ ಹೊಸ ಬೆಳವಣಿಗೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನದ ಮೇಲೆ, 2016 ರ ಬಹು-ಶತಕೋಟಿ ಡಾಲರ್ ಮೊತ್ತದ ರಫೇಲ್ ಫೈಟರ್ ಜೆಟ್ಗಳನ್ನು ಭಾರತಕ್ಕೆ ಮಾರಾಟ ಮಾಡಿದ ಬಗ್ಗೆ ತನಿಖೆ ನಡೆಸಲು ಫ್ರೆಂಚ್ ಸರ್ಕಾರ ನ್ಯಾಯಾಧೀಶರನ್ನು ನೇಮಿಸಿದೆ ಎಂದು 'ರಾಷ್ಟ್ರೀಯ ಹಣಕಾಸು ಅಭಿಯೋಜಕರ ಕಚೇರಿ’ '(ಪಿಎನ್ಎಫ್) ಶುಕ್ರವಾರ ತಿಳಿಸಿದೆ. ‘ಪಿಎನ್ಎಫ್’ ಫ್ರಾನ್ಸ್ನ ನ್ಯಾಯಾಂಗ ಸಂಸ್ಥೆಯಾಗಿದ್ದು ಇದು ಗಂಭೀರ ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡುತ್ತದೆ.
ರಫೇಲ್ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ತನಿಖೆಯಲ್ಲಿ ಸಾಬೀತಾದರೆ ಭಾರತದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಲಿದ್ದು, ಪ್ರಧಾನಿ ಮೋದಿಗೆ ಹಿನ್ನಡೆ ಆಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸರ್ಕಾರ ಮತ್ತು ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ನಡುವಿನ 36 ವಿಮಾನಗಳಿಗೆ 7.8 ಬಿಲಿಯನ್ ಯುರೋ ( 9.3 ಬಿಲಿಯನ್ ಡಾಲರ್) ಒಪ್ಪಂದವು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದೆ. ಇದು ರಾಜಕೀಯವಾಗಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತ್ತು.
ಫ್ರೆಂಚ್ ತನಿಖಾ ವೆಬ್ಸೈಟ್ ಆಗಿರುವ ಮೀಡಿಯಾಪಾರ್ಟ್ ಕಳೆದ ಏಪ್ರೀಲ್ನಲ್ಲಿ ರಫೇಲ್ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹಲವಾರು ವರದಿಗಳನ್ನು ಮಾಡಿತ್ತು. ಈ ಹಿನ್ನಲೆಯಲ್ಲಿ ‘ಪಿಎನ್ಎಫ್’ 2016 ರ ರಫೇಲ್ ಒಪ್ಪಂದದ ಸುತ್ತಲಿನ ಅನುಮಾನಗಳ ಬಗ್ಗೆ ತನಿಖೆ ನಡೆಸಲು ನ್ಯಾಯಾಧೀಶರನ್ನು ನೇಮಿಸಿದೆ.
ಮೀಡಿಯಾಪಾರ್ಟ್ ವೆಬ್ಸೈಟ್ ಏಪ್ರಿಲ್ನಲ್ಲಿ ಮಾಡಿದ್ದ ವರದಿಯಲ್ಲಿ, "ಗುಪ್ತವಾಗಿ ಲಕ್ಷಾಂತರ ಯುರೋಗಳಷ್ಟು ಕಮೀಷನ್ಗಳನ್ನು ಮಾರಾಟ ಮಾಡಲು ಸಹಾಯ ಮಾಡಿದವರಿಗೆ ನೀಡಲಾಗಿದೆ" ಎಂದು ಹೇಳಿದೆ. ಈ ಹಣಗಳಲ್ಲಿ ಒಂದಷ್ಟು ಲಂಚವಾಗಿ ಭಾರತೀಯ ಅಧಿಕಾರಿಗಳಿಗೆ ಕೂಡಾ ನೀಡಲಾಗಿತ್ತು ಎಂದು ಅದು ಉಲ್ಲೇಖಿಸಿದೆ.
ಈ ವರದಿಗಳ ನಂತರ, ಹಣಕಾಸಿನ ಅಪರಾಧದಲ್ಲಿ ಪರಿಣತಿ ಹೊಂದಿರುವ ‘ಫ್ರಾನ್ಸ್ನ ಶೆರ್ಪಾ ಎನ್ಜಿಒ’, ಇತರ ಆರೋಪಗಳೊಂದಿಗೆ ಭ್ರಷ್ಟಾಚಾರ ಮತ್ತು ಪ್ರಭಾವ ಬೀರಿದ್ದಕ್ಕಾಗಿ ಅಧಿಕೃತ ದೂರು ದಾಖಲಿಸಿದ್ದು, ಒಪ್ಪಂದದ ತನಿಖೆಗಾಗಿ ತನಿಖಾ ಮ್ಯಾಜಿಸ್ಟ್ರೇಟ್ನನ್ನು ನೇಮಕ ಮಾಡಲು ಒತ್ತಾಯಿಸಿತ್ತು.
ಶೆರ್ಪಾ 2018 ರಲ್ಲಿ ಈ ಒಪ್ಪಂದದ ಬಗ್ಗೆ ತನಿಖೆ ತನಿಖೆ ನಡೆಸಬೇಕು ಎಂದು ಕೇಳಿದ್ದರು, ಆದರೆ ಪಿಎನ್ಎಫ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದು ತನ್ನ ಈ ಮೊದಲ ದೂರಿನಲ್ಲಿ, ಡಸಾಲ್ಟ್ ತನ್ನ ಭಾರತೀಯ ಪಾಲುದಾರನಾಗಿ ರಿಲಯನ್ಸ್ ಗ್ರೂಪ್ ಅನ್ನು ಆಯ್ಕೆ ಮಾಡಿದೆ ಎಂಬ ಅಂಶವನ್ನು ಖಂಡಿಸಿತ್ತು. ರಿಲಾಯನ್ಸ್ ಪ್ರಧಾನಿ ನರೇಂದ್ರ ಮೋದಿಯವರ ಆಪ್ತರಾಗಿರುವ ಅನಿಲ್ ಅಂಬಾನಿ ನೇತೃತ್ವದ ಸಂಸ್ಥೆಯಾಗಿದೆ.
ಭಾರತಕ್ಕೆ 126 ಜೆಟ್ಗಳನ್ನು ಪೂರೈಸುವ ಒಪ್ಪಂದವನ್ನು ಡಸಾಲ್ಟ್ 2012 ರಲ್ಲಿ ಮಾಡಿಕೊಂಡಿತ್ತು ಮತ್ತು ಭಾರತೀಯ ಏರೋಸ್ಪೇಸ್ ಕಂಪನಿಯಾದ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (ಎಚ್ಎಎಲ್) ನೊಂದಿಗೆ ಮಾತುಕತೆ ಕೂಡಾ ನಡೆಸಿತ್ತು.
ಮಾರ್ಚ್ 2015 ರ ಹೊತ್ತಿಗೆ, ಈ ಮಾತುಕತೆಗಳು ಬಹುತೇಕ ತೀರ್ಮಾನಕ್ಕೆ ಬಂದಿದ್ದವು ಎಂದು ಡಸಾಲ್ಟ್ ಹೇಳಿತ್ತು. ಆದರೆ ಅದೇ ವರ್ಷದ ಏಪ್ರಿಲ್ನಲ್ಲಿ, ಪ್ರಧಾನಿ ಮೋದಿ ಫ್ರಾನ್ಸ್ಗೆ ಅಧಿಕೃತ ಭೇಟಿ ನೀಡಿದ ನಂತರ, ಈ ಒಪ್ಪಂದದ ಮಾತುಕತೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ