35 ಮಕ್ಕಳ ಈ ತಂದೆಗೆ 100 ಮಕ್ಕಳ ಪಡೆಯುವ ಗುರಿ

ಶುಕ್ರವಾರ, 3 ಜೂನ್ 2016 (12:44 IST)
ಇಬ್ಬರು ಮಕ್ಕಳನ್ನು ಸಂಭಾಳಿಸುವುದಕ್ಕೆ, ಸಾಕುವುದಕ್ಕೆ ಏದುಸಿರು ಬಿಡುವ ಈ ಕಾಲದಲ್ಲಿ ಪಾಕಿಸ್ತಾನದಲ್ಲೊಬ್ಬ 35 ಮಕ್ಕಳಿಗೆ ತಂದೆಯಾಗಿದ್ದಾನೆ. ಇಷ್ಟಕ್ಕೆ ಆತನಿಗೆ ಸಮಾಧಾನವಿಲ್ಲ. 100 ಮಕ್ಕಳಿಗೆ ಅಪ್ಪನಾಗಬೇಕೆಂಬುದೇ ನನ್ನ ಜೀವನದ ಗುರಿ ಎನ್ನುವ ಈತ ಈ ಉದ್ದೇಶದಿಂದ ನಾಲ್ಕನೆಯ ಮದುವೆಯಾಗಲು ಹೊರಟಿದ್ದಾನೆ.
ಕ್ವೆಟ್ಟಾದ ಬಲೂಚಿಸ್ತಾನ್‌ದಲ್ಲಿ ನೆಲೆಸಿರುವ ಜಾನ್ ಮೊಹಮ್ಮದ್ ಖಿಜ್ಜಿ (46) ವೃತ್ತಿಯಲ್ಲಿ ವೈದ್ಯ ಮತ್ತು ವ್ಯಾಪಾರಿ. ಹೆಚ್ಚೆಚ್ಚು ಮಕ್ಕಳನ್ನು ಹೊಂದುವುದು ಧಾರ್ಮಿಕ ಕರ್ತವ್ಯ ಎನ್ನುವ ಈತ ಮೂರು ಪತ್ನಿಯರಿಂದ ಒಟ್ಟು 35 ಮಕ್ಕಳನ್ನು ಪಡೆದಿದ್ದಾನೆ. 
 
35 ಮಕ್ಕಳಲ್ಲಿ 21 ಮಂದಿ ಹೆಣ್ಣುಮಕ್ಕಳು, 14 ಮಂದಿ ಗಂಡು ಮಕ್ಕಳಿದ್ದಾರೆ. ನನ್ನ ಮಕ್ಕಳೆಲ್ಲರ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ಆದರೆ ಹೆಸರನ್ನು ನೆನಪಿಟ್ಟುಕೊಳ್ಳುವುದೊಂದೇ ನಾನು ಎದುರಿಸುತ್ತಿರುವ ಸಮಸ್ಯೆ ಎನ್ನುತ್ತಾನೆ ಈ ಮಹಾ ತಂದೆ. ದೇವರು ದೊಡ್ಡವನು. ಬೆಳೆಯುತ್ತಿರುವ ನನ್ನ ಕುಟುಂಬದ ವೆಚ್ಚವನ್ನು ತೂಗಿಸಲು ನಾನು ಸಮರ್ಥನಿದ್ದೇನೆ. ಮಕ್ಕಳ ಶಿಕ್ಷಣಕ್ಕೆ ಪ್ರತಿ ತಿಂಗಳು 1 ಲಕ್ಷ ರೂ. ಖರ್ಚು ಮಾಡುತ್ತಿದ್ದೇನೆ. ಅವರೆಲ್ಲರನ್ನು ವಿದ್ಯಾವಂತರನ್ನಾಗಿಸುವುದು ನನ್ನ ಗುರಿ. ಮನೆಯಲ್ಲಿ ಹೆಚ್ಚು ಸದಸ್ಯರಿದ್ದರೆ ಕುಟುಂಬ ಸಂತೋಷದಿಂದ ಇರುತ್ತದೆ ಎನ್ನುತ್ತಾನಾತ. ಈ ಸಂತೃಪ್ತ ಕುಟುಂಬದಲ್ಲಿ ಒಂದು ವಾರದ ಮಗುವಿನಿಂದ ಹಿಡಿದು 16 ವರ್ಷದವರೆಗಿನ ಮಕ್ಕಳು ಇದ್ದಾರೆ. ಕ್ವೆಟ್ಟಾದಲ್ಲಿರುವ ಮಣ್ಣು-ಇಟ್ಟಿಗೆ ಮನೆಯಲ್ಲಿ 39 ಜನ ಸದಸ್ಯರುಳ್ಳ ಈ ದೊಡ್ಡ ಕುಟುಂಬ ವಾಸವಾಗಿದೆ.
 
ವಿಶೇಷವೆಂದರೆ ಆತನ ಈ ವಿಚಿತ್ರ ಬಯಕೆಗೆ ಆತನ ಮೂವರು ಪತ್ನಿಯರು ಸಾಥ್ ನೀಡಿದ್ದಾರೆ. ನಾವು ಮೂರು ಜನ ಹೊಂದಿಕೊಂಡಿದ್ದೇವೆ. ಮತ್ತೊಬ್ಬರು ಜತೆಗೂಡಿದರೆ ಸಹ ಈ ಸಹಭಾಗಿತ್ವ ಮುಂದುವರೆಯುತ್ತದೆ ಎನ್ನುತ್ತಾರಂತೆ ಅವರು. ಆದರೆ ಪತ್ರಿಕೆ ಅವರನ್ನು ಮಾತನಾಡಿಸಲು ಪ್ರಯತ್ನ ಪಟ್ಟಾಗ ಜಾನ್ ಮೊಹಮ್ಮದ್ ಅವಕಾಶ ಕೊಡುವುದಿಲ್ಲ. 
 
ಪಾಕಿಸ್ತಾನಿ ಪುರುಷರಿಗೆ ಇಸ್ಲಾಂ ಕಾನೂನು ನಾಲ್ಕು ಪತ್ನಿಯರನ್ನು ಹೊಂದಲು ಅವಕಾಶ ನೀಡುತ್ತದೆ. ಆದರೆ ಅವರು ಪ್ರಥಮ ಪತ್ನಿ ಮತ್ತು ಆರ್ಬಿಟ್ರೇಷನ್ ಕೌನ್ಸಿಲ್ ಒಪ್ಪಿಗೆ ಪಡೆಯಬೇಕಾಗುತ್ತದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ