ಹಾಲಿಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದರೆ ವೆನಿಲ್ಲಾ ಸೇರಿಸಬೇಕಂತೆ!
ಭಾನುವಾರ, 23 ಜೂನ್ 2019 (06:26 IST)
ವಾಷಿಂಗ್ಟನ್ : ಹಾಲಿಗೆ ಸೇರಿಸುವ ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದುಕೊಳ‍್ಳುವವರು ಹಾಲಿಗೆ ವೆನಿಲ್ಲಾ ಸೇರಿಸಿ. ಇದರಿಂದ ಬರುವ ಪರಿಮಳವು, ಹಾಲು ಸಿಹಿಯಾಗಿದೆ ಎಂದು ಮೆದುಳು ಯೋಚಿಸುವಂತೆ ಮಾಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಹೌದು. ಯುಎಸ್ ನ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಇಲ್ಲಿ ಕೆಲವರನ್ನು ಬ್ಲೈಂಡ್ ಟೇಸ್ಟ್ ಎಂಬ ಪರೀಕ್ಷೆಗೆ ಒಳಡಿಸಿದ್ದು, ಅದರಲ್ಲಿ ಭಾಗವಹಿಸಿದವರಿಗೆ ಹಾಲಿಗೆ ವೆನಿಲ್ಲಾ ಸೇರಿಸಿ ನೀಡಲಾಗಿತ್ತು. ಆ ವೇಳೆ ಈ ವಿಚಾರ ತಿಳಿದುಬಂದಿದೆ.
ವೆನಿಲ್ಲಾ ವನ್ನು ಹಾಲಿಗೆ ಸೇರಿಸಿದರೆ ಅದರ ಸುವಾಸನೆಯಿಂದ ಹಾಲಿಗೆ ಸೇರಿಸಲಾಗುವ ಸಕ್ಕರೆ ಅಂಶವನ್ನು ಶೇಕಡಾ 20ರಿಂದ 50ರಷ್ಟು ಕಡಿಮೆಗೊಳಿಸಬಹುದು ಎಂದು ಈ ಬಗ್ಗೆ ಸಂಶೋಧನೆ ನಡೆಸಿದ್ದ ಸಂಶೋಧಕಿಯೊಬ್ಬರು ಹೇಳಿದ್ದಾರೆ. ಕೊಬ್ಬು ಮತ್ತು ಉಪ್ಪನ್ನು ಕಡಿಮೆ ಮಾಡುವುದರ ಜೊತೆಗೆ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಈ ಪಾನೀಯ “ಆಹಾರ ವಿಜ್ಞಾನದ ಪವಿತ್ರ ಪಾನೀಯ” ಎಂದು ಅಲ್ಲಿನ ಸಂಶೋಧಕರು ಹೇಳಿದ್ದಾರೆ.
ಅಲ್ಲದೇ ಇದರಿಂದ ಸ್ವೀಟ್ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಅದರ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಸಿಹಿ ಇಷ್ಟಪಡುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಹಕಾರಿಯಾಗಿದೆ ಎನ್ನಲಾಗಿದೆ.