ನವದೆಹಲಿ: ತನ್ನ ಮಾತು ಕೇಳದ ಭಾರತದ ಮೇಲಿನ ಹೊಟ್ಟೆ ಉರಿಗೆ ಅಮೆರಿಕಾ ದಿನಕ್ಕೊಂದರಂತೆ ಭಾರತ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
ಭಾರತದ ಪರಮ ಶತ್ರು ಪಾಕಿಸ್ತಾನದ ಜೊತೆ ಅಮೆರಿಕಾ ಈಗ ಕುಚಿಕು ಗೆಳೆಯನಂತೆ ಆಡುತ್ತಿದೆ. ಪಾಕಿಸ್ತಾನದ ಕುಕೃತ್ಯಗಳೆಲ್ಲವೂ ತಿಳದಿದ್ದರೂ ಭಾರತದ ಹೊಟ್ಟೆ ಉರಿಸಲೇನೋ ಎಂಬಂತೆ ಆ ದೇಶದೊಂದಿಗೆ ಒಪ್ಪಂದಗಳು, ಆ ದೇಶಕ್ಕೆ ಅನುಕೂಲಕರವಾಗುವಂತಹ ಯೋಜನೆ ಹಾಕಿಕೊಂಡು ಕೂತಿದೆ.
ಇದೀಗ ಪಾಕಿಸ್ತಾನಕ್ಕೆ ಮಗ್ಗಲ ಮುಳ್ಳಾಗಿರುವ ಬಲೂಚಿಸ್ತಾನ್ ಪ್ರತ್ಯೇಕತವಾದಿ ಹೋರಾಟಗಾರರನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ. ಆ ಮೂಲಕ ಪಾಕಿಸ್ತಾನಕ್ಕೆ ಬೆಣ್ಣೆ ಸವರಿ, ಇತ್ತ ಭಾರತದ ಹೊಟ್ಟೆ ಉರಿಸಲು ಮುಂದಾಗಿದೆ. ಬಲೂಚಿಸ್ತಾನ್ ಪ್ರತ್ಯೇಕತಾವಾದಿ ಹೋರಾಟಗಾರರು ಭಾರತದ ಪರ ಇದ್ದಾರೆ. ಇದೇ ಕಾರಣಕ್ಕೆ ಈ ರೀತಿ ಸೇಡು ತೀರಿಸಿಕೊಂಡಿದೆ.
ಇದಕ್ಕೆ ಮೊದಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ತನ್ನ ನೆಲದಲ್ಲೇ ಪರಮಾಣು ಶಸ್ತ್ರಾಸ್ತ್ರ ಬಳಸಿ ಭಾರತ ಸೇರಿದಂತೆ ಅರ್ಧ ಪ್ರಪಂಚವನ್ನೇ ನಾಶ ಮಾಡುವುದಾಗಿ ಹೇಳಿದರೂ ಮೌನ ವಹಿಸಿತ್ತು. ರಷ್ಯಾ ಜೊತೆಗೆ ಭಾರತ ವ್ಯಾಪಾರ ಒಪ್ಪಂದ ಕೊನೆಗೊಳಿಸಬೇಕೆಂದು ಇನ್ನಿಲ್ಲದ ಸಾಹಸ ಮಾಡುತ್ತಿದೆ. ಆದರೆ ಭಾರತ ಮಾತ್ರ ಇದಕ್ಕೆ ಸೊಪ್ಪು ಹಾಕುತ್ತಿಲ್ಲ.