ಮಾಸ್ಕೊ: ರಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಗಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರೈವೇಟ್ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲಾಗಿದೆ.
ನಿನ್ನೆ ರಾತ್ರಿ ಭಾರತೀಯ ಪ್ರಧಾನಿಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಖಾಸಗಿ ಔತಣಕೂಟ ಏರ್ಪಡಿಸಿದ್ದರು. ಮೋದಿ ಜೊತೆಗೆ ಪುಟಿನ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಕಾರಣಕ್ಕೆ ಮೋದಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿ ಉಪಚರಿಸಿದ್ದರು. ಈ ವೇಳೆ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯರನ್ನು ಬಿಡುಗಡೆ ಮಾಡಲು ಪುಟಿನ್ ಮನವೊಲಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ಯುದ್ಧದಲ್ಲಿ ರಷ್ಯಾ ಸೇನೆಯು ಭಾರತೀಯರನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ಮೋದಿ ರಷ್ಯಾ ಭೇಟಿ ವೇಳೆ ಮಾತುಕತೆ ನಡೆಸಲಿದ್ದಾರೆ ಎಂಬ ಸುಳಿವು ಈಗಾಗಲೇ ಸಿಕ್ಕಿತ್ತು. ಅದರಂತೆ ಪುಟಿನ್ ಜೊತೆ ಔತಣಕೂಟದಲ್ಲಿ ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋದಿಯನ್ನು ಸ್ನೇಹಿತ ಎಂದು ಕರೆದಿರುವ ಪುಟಿನ್, ಸ್ನೇಹಿತನಿಗೆ ಮನೆಯಲ್ಲಿಯೇ ಪಾರ್ಟಿ ಕೊಡಿಸುವುದಕ್ಕೆ ಖುಷಿಯಾಗುತ್ತಿದೆ ಎಂದಿದ್ದಾರೆ.
ಸ್ನೇಹಿತ ಮೋದಿ ಬಗ್ಗೆ ಮಾತನಾಡಿರುವ ಪುಟಿನ್, ಭಾರತೀಯ ಜನರಿಗಾಗಿ ಮೋದಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಎರಡು ದಿನಗಳ ರಷ್ಯಾ ಪ್ರವಾಸಕ್ಕಾಗಿ ತೆರೆಳಿರುವ ಮೋದಿ ನಿನ್ನೆ ಸಂಜೆ ಮಾಸ್ಕೊಗೆ ಬಂದಿಳಿದಿದ್ದರು. ಈ ವೇಳೆ ಅವರನ್ನು ಅಲ್ಲಿನ ಭಾರತೀಯರು ಸ್ವಾಗತಿಸಿದ್ದರು.