ಕೀವ್ : ಉಕ್ರೇನ್ನ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಶಾಂತಿ ಮಾತುಕತೆ ಮೂಲಕ ಬಿಕ್ಕಟ್ಟು ಶಮನ ಮಾಡಿಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.
ಆ ಮೂಲಕ ನಾಲ್ಕು ದಿನಗಳಿಂದ ಉಕ್ರೇನ್ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿ, ಮಾರಣಹೋಮವು ಶೀಘ್ರವೇ ಅಂತ್ಯವಾಗುವ ಲಕ್ಷಣಗಳು ಗೋಚರಿಸಿವೆ.
ರಷ್ಯಾ ಮೇಲೆ ಜಗತ್ತಿನ ಹಲವು ರಾಷ್ಟ್ರಗಳು ಹೇರುತ್ತಿರುವ ಒತ್ತಡ, ಆರ್ಥಿಕ ನಿರ್ಬಂಧ ಸೇರಿ ಹಲವು ಕಾರಣಗಳಿಂದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾತುಕತೆಗೆ ಒಪ್ಪಿದರು. ನೆರೆ ರಾಷ್ಟ್ರ ಬೆಲಾರಸ್ನಲ್ಲಿ ಸಂಧಾನ ಮಾತುಕತೆ ನಡೆಯಲಿ ಎಂಬ ಷರತ್ತು ಹಾಕಿದ್ದರು.
''ಮಾತುಕತೆಗೆ ಸಿದ್ಧ, ಆದರೆ ಬೆಲಾರಸ್ ಬದಲು ಬೇರೆಡೆ ಸ್ಥಳ ನಿಗದಿಯಾಗಲಿ,'' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪಟ್ಟುಹಿಡಿದರು. ಕೊನೆಗೆ ಇಬ್ಬರೂ ನಾಯಕರು ಹಠ ಬಿಟ್ಟು ಸಂಧಾನ, ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ. ''ಚೆರ್ನೊಬಿಲ್ನ ಉತ್ತರ ಭಾಗದಲ್ಲಿರುವ ಪ್ರಿಪ್ಯಾತ್ ನದಿ ತೀರದಲ್ಲಿ ಶಾಂತಿ ಮಾತುಕತೆ ನಡೆಯಲಿದೆ,'' ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ವಕ್ತಾರರೊಬ್ಬರು ತಿಳಿಸಿದ್ದಾರೆ.