ಜಮ್ಮು&ಕಾಶ್ಮೀರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನ ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಪಿಒಕೆಯಲ್ಲಿ ಈಗ ಜನ ದಂಗೆಯೆದ್ದಿದ್ದು ಪಾಕಿಸ್ತಾನಕ್ಕೆ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತಿದೆ. ಅಷ್ಟಕ್ಕೂ ಇಲ್ಲಿ ಜನ ಪಾಕಿಸ್ತಾನ ವಿರುದ್ಧ ತಿರುಗಿಬೀಳಲು ಕಾರಣವೇನು ನೋಡೋಣ.
ಪಾಕಿಸ್ತಾನ ಸರ್ಕಾರ ಅನುಸರಿಸುತ್ತಿರುವ ತಾರತಮ್ಯ ನೀತಿ ಕೊನೆಯಾಗಬೇಕು. ಕೆಲವೇ ವರ್ಗದವರಿಗೆ ಮೀಸಲಾಗಿರುವ ವಿಶೇಷ ಸವಲತ್ತುಗಳನ್ನು ರದ್ದು ಪಡಿಸಬೇಕು ಎಂದು ಪಿಒಕೆ ಜನ ಬೇಡಿಕೆಯಿಟ್ಟಿದ್ದಾರೆ. ಅಲ್ಲದೆ, ಇಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ತಲುಪಿದ್ದು ಹಣದುಬ್ಬರ ನಿಯಂತ್ರಿಸಲು ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಜನ ತಿರುಗಿಬಿದ್ದಿದ್ದಾರೆ.
ಇಲ್ಲಿನ ಜನ ದಂಗೆಯೇಳುತ್ತಿದ್ದಂತೇ ಎಚ್ಚೆತ್ತುಕೊಂಡ ಪಾಕಿಸ್ತಾನಕ್ಕೆ ಸರ್ಕಾರ ಈ ಭಾಗಕ್ಕೆ ವಿಶೇಷ ಅನುದಾನ ಘೋಷಿಸಿದೆ. ಆದರೆ ಇದ್ಯಾವುದೂ ಇಲ್ಲಿನ ಜನರಿಗೆ ಸಮಾಧಾನ ತರುತ್ತಿಲ್ಲ. ಪಾಕಿಸ್ತಾನ ಸರ್ಕಾರದ ಯಾವುದೇ ಆಶ್ವಾಸನೆಗಳನ್ನೂ ನಂಬಲ್ಲ ಎನ್ನುತ್ತಿದ್ದಾರೆ. ಈ ಪ್ರತಿಭಟನೆಗೆ ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಸಿ) ನೇತೃತ್ವ ವಹಿಸಿದೆ.
ಇನ್ನೊಂದೆಡೆ ಪಿಒಕೆ ಮೇಲೆ ಭಾರತ ತನ್ನ ಹಕ್ಕು ಸ್ಥಾಪಿಸುತ್ತಲೇ ಬಂದಿದೆ. ಇತ್ತೀಚೆಗೆ ವಿವಿಧ ಮಸೂದೆಗಳ ಮೂಲಕ ಪಿಒಕೆ ಮೇಲೆ ಆಧಿಕೃತವಾಗಿ ಹಕ್ಕು ಚಲಾಯಿಸುತ್ತಿದೆ. ಇದು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಜೊತೆಗೆ ಈಗ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಭಾರತದ ನೆರವಿಗಾಗಿ ಎದಿರು ನೋಡುತ್ತಿದ್ದಾರೆ. ಹೀಗಾಗಿ ಎಲ್ಲಿ ಪಿಒಕೆ ತನ್ನ ಕೈ ತಪ್ಪಿ ಹೋಗುತ್ತದೋ ಎಂಬ ಭಯ ಪಾಕಿಸ್ತಾನಕ್ಕೆ ಶುರುವಾಗಿದೆ.
ಸದ್ಯಕ್ಕೆ ಪಿಒಕೆ ರಾಜಧಾನಿ ಮುಜಫರಾಬಾದ್, ರಾವಲಾಕೋಟ್, ಮೀರ್ಪುರ್, ಪೂಂಚ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಯ ಕಾವು ಜೋರಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪಾಕ್ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸಿ ಗೋಲಿಬಾರ್ ನಡೆಸಿದ್ದು ಮತ್ತಷ್ಟು ಹಿಂಸಾಚಾರಕ್ಕೆ ತಿರುಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಯ ಕಾವು ಇನ್ನಷ್ಟು ಜೋರಾಗುವ ನಿರೀಕ್ಷೆಯಿದೆ.