ನವದೆಹಲಿ: ಸಾಮಾನ್ಯಾವಾಗಿ ಪಾಕಿಸ್ತಾನ ಸದಾ ತನ್ನ ನೆರೆಯ ರಾಷ್ಟ್ರ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತದೆ. ಆದರೆ ಇದೀಗ ಭಾರತೀಯ ನೌಕಾಪಡೆಗೆ ಪಾಕಿಸ್ತಾನಿಯರು ಜೈಕಾರ ಹಾಕಿದ್ದಾರೆ.
ಕಳೆದ ವಾರ ಯೆಮನ್ ನ ಸೊಕೋತ್ರ ದ್ವೀಪದ ಸಮುದ್ರ ಭಾಗದಲ್ಲಿ ಕಡಲ್ಗಳ್ಳರು ಇರಾನ್ ನ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದ್ದರು. ಈ ದೋಣಿಯಲ್ಲಿ 23 ಪಾಕಿಸ್ತಾನಿಯರು ಸಿಲುಕಿಕೊಂಡಿದ್ದರು. ಇವರನ್ನು ಭಾರತೀಯ ನೌಕಾಸೇನೆಯ ಐಎನ್ ಎಸ್ ಸುಮೇಧಾ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದರು.
12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದ ನೌಕಾಪಡೆ ಎಲ್ಲಾ ಪಾಕಿಸ್ತಾನಿಯರ ಜೀವ ಉಳಿಸಿತ್ತು. ಇದಕ್ಕೆ ಪಾಕಿಸ್ತಾನಿಯರು ಕೃತಜ್ಞತೆ ಸಲ್ಲಿಸಿದ್ದಾರೆ. ದೋಣಿಯ ಮುಖ್ಯಸ್ಥ ಅಮೀರ್ ವಿಡಿಯೋ ಸಂದೇಶ ನೀಡಿ ತಮ್ಮ ಜೀವ ಉಳಿಸಿದ ಭಾರತೀಯ ನೌಕಾಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ವಿಡಿಯೋ ಸಂದೇಶದಲ್ಲಿ ಸೊಮಾಲಿಯಾ ಕಡಲ್ಗಳ್ಳರಿಂದ ಭಾರತೀಯ ನೌಕಾಪಡೆ ನಮ್ಮನ್ನು ರಕ್ಷಿಸಿದೆ ಎಂದಿದ್ದು, ಕೊನೆಯಲ್ಲಿ ಎಲ್ಲರೂ ಭಾರತ ಜಿಂದಾಬಾದ್ ಎಂದಿದ್ದಾರೆ. ಇತ್ತೀಚೆಗೆ ಸೊಮಾಲಿಯಾ ಕಡಲ್ಗಳ್ಳರ ಹಾವಳಿ ಜೋರಾಗಿದೆ. ಸೊಮಾಲಿಯಾ, ಸಿರಿಯಾ ಮೊದಲಾದ ಭಾಗಗಳಲ್ಲಿ ಹಾದುಹೋಗುವ ಹಡಗುಗಳನ್ನು ಅಪಹರಿಸುವ ಅನೇಕ ಘಟನೆಗಳು ಕೇಳಿಬರುತ್ತಿವೆ.