ಅದ್ಬುತ ಪ್ರತಿಭೆಗಳಿದ್ದರೂ ಜಹೀರ್ ಖಾನ್ ನಾಯಕತ್ವದ ದೆಹಲಿ ತಂಡಕ್ಕೆ ಗೆಲುವಿನ ಸಿಹಿ ಸಿಗುತ್ತಿಲ್ಲ. ಪ್ರತೀ ಪಂದ್ಯದಲ್ಲೂ ಅಂತ್ಯದವರೆಗೂ ಹೋರಾಟ ನಡೆಸುವ ದೆಹಲಿ ಬಾಯ್ಸ್ ಗೆಲುವಿನ ದಡ ತಲುಪುವಲ್ಲಿ ವಿಫಲವಾಗುತ್ತಿದ್ದಾರೆ. ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅಪ್ಪಟ ದೇಶಿ ಪ್ರತಿಭೆಗಳಾದ ರಿಶಬ್ ಪಂತ್, ಕರುಣ್ ನಾಯರ್, ಸಂಜು ಸಾಮ್ಸನ್, ಶ್ರೇಯಸ್ ಅಯ್ಯರ್ ಅನುಭವಿಗಳಾದ ಜಹೀರ್, ಅಮಿತ್ ಮಿಶ್ರಾ, ಆಲ್ರೌಂಡರ್ ಮೋರಿಸ್, ಆಸೀಸ್ ವೇಗಿ ಪಟ್ ಕಮಿನ್ಸ್, ಸ್ಫೋಟಕ ಬ್ಯಾಟ್ಸ್`ಮನ್ ಕೋರೆ ಅಂಡರ್ಸನ್ ಇವೆಲ್ಲದರ ಜೊತೆಗೆ ರಾಹುಲ್ ದ್ರಾವಿಡ್`ರಂತಹ ಕೋಚಿಂಗ್ ಇದ್ದರೂ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಪ್ರತೀ ಪಂದ್ಯದಲ್ಲೂ ಎದುರಾಳಿಗಳನ್ನ ಬೆಚ್ಚಿಬೀಳಿಸುವ ಡೆಲ್ಲಿ ಆಟಗಾರರು ಜಯ ಹೊಸ್ತಿಲಲ್ಲೇ ಸೋತು ಸುಣ್ಣವಾಗುತ್ತಿದ್ದಾರೆ.
ಆರ್`ಸಿಬಿ ವಿರುದ್ಧ ಎಡವಿತ್ತು ಡೆಲ್ಲಿ: ಮೊದಲ ಪಂದ್ಯದಲ್ಲೇ ಸಾಧಾರಣ 158 ರನ್`ಗಳ ಗುರಿ ತಲುಪಲಾಗದೇ ಡೆಲ್ಲಿ ಸೋತಿತ್ತು. ತಂದೆಯ ಸಾವಿನ ಬಳಿಕವೂ ಫೀಲ್ಡಿಗಿಳಿದಿದ್ದ ರಿಶಬ್ ಪಂತ್ ಅರ್ಧಶತಕ ಸಿಡಿಸಿದರಾದರೂ ಅವರಿಗೆ ಬೇರೆಯವರಿಂದ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ, 15 ರನ್`ಗಳ ಸೋಲು ಕಂಡಿತ್ತು.
ಸನ್ ರೈಸರ್ಸ್ ವಿರುದ್ಧ ಸೋಲು ತಂದಿಟ್ಟ ಮ್ಯಾಥ್ಯೂಸ್: ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಜಯಿಸುವ ಎಲ್ಲ ಸಾಧ್ಯತೆಗಳಿತ್ತು. 192 ರನ್ ಗುರಿ ಬೆನ್ನತ್ತಿದ್ದ ಡೆಲ್ಲಿ ಉತ್ತಮ ಆರಂಭವೇ ಸಿಕ್ಕಿತ್ತು. ಸಂಜು ಸ್ಯಾಮ್ಸನ್ 42, ಕರುಣಾ ನಾಯರ್ 33 ಮತ್ತು ಕೊನೆಯವರೆಗೂ ಇದ್ದ ಶ್ರೇಯರ್ ಅಯ್ಯರ್ ಅರ್ಧಶತಕ ಸಿಡಿಸಿದ್ದರು. ಇತ್ತ ಶ್ರೇಯಸ್ ಅಯ್ಯರ್ ಜೊತೆ ಬ್ಯಾಟಿಂಗ್ ಮಾಡಿದ್ದ ಲಂಕಾ ಕ್ರಿಕೆಟಿಗ ಏಂಜಲೋ ಮ್ಯಾಥ್ಯೂಸ್ ಹೋರಾಟದ ಪರಾಕ್ರಮ ತೋರಲಿಲ್ಲ. ರನ್ ರೇಟ್ ಅಸಾಧ್ಯವಾಗುವವರೆಗೂ ನಿಧಾನಗತಿಯ ಬ್ಯಾಟಿಂಗ್ ಮಾಡಿ ಅಂತಿಮ ಓವರಿನಲ್ಲಿ ಔಟಾಗಿ ತಂಡಕ್ಕೆ ಸೋಲು ತಂದಿಟ್ಟರು. ಮ್ಯಾಥ್ಯೂಸ್ ಬದಲಿಗೆ ಕ್ರಿಸ್ ಮೋರೀಸ್ ಬಂದಿದ್ದರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು.
ಮುಂಬೈ ವಿರುದ್ಧ ಮೋರಿಸ್ ಹೋರಾಟ ವ್ಯರ್ಥ: ಮುಂಬೈ ವಿರುದ್ಧ ಜಹೀರ್ ಪಡೆ ಉತ್ತಮ ಬೌಲಿಂಗ್ ಸಂಘಟಿಸಿತ್ತು. ಕೇವಲ 142 ರನ್`ಗಳಿಗೆ ಮುಂಬೈ ತಂಡವನ್ನ ನಿಯಂತ್ರಿಸಿತ್ತು. ಆದರೆ. ಡೆಲ್ಲಿ ಆರಂಭಿಕ ಆಘಾತ ಕಾದಿತ್ತು. 24 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ 6 ಬ್ಯಾಟ್ಸ್`ಮನ್`ಗಳು ಪೆವಿಲಿಯನ್ ಸೇರಿದರು. ಆಮೇಲೆ ಆರಂಭವಾಗಿದ್ದೇ ಕ್ರಿಸ್ ಮೋರಿಸ್ ಮತ್ತು ರಬಾಡಾ ಆಟ. ಯಾವುದೇ ಗಾಬರಿಗೊಳಗಾಗದೇ ಈ ಇಬ್ಬರು ಆಟಗಾರರು ಉತ್ತಮ ಬ್ಯಾಟಿಂಗ್ ಮಾಡಿದರು. 44 ರನ್ ಗಳಿಸಿ ರಬಾಡಾ ನಿರ್ಗಮನದ ಬಳಿಕವೂ ಅರ್ಧಶತಕ ಸಿಡಿಸಿದ ಮೋರಿಸ್ ಹೋರಾಟ ಮುಂದುವರೆಸಿದರು. ಕೊನೆಯ ಓವರಿನಲ್ಲಿ 20ಕ್ಕೂ ಅಧಿಕ ರನ್ ಬೇಕಿತ್ತು. ಮೋರಿಸ್ ಹೋರಾಟ ನಡೆಸಿದರಾದರೂ ಗೆಲುವು ಸಾಧ್ಯವಾಗಲಿಲ್ಲ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ