ಐಪಿಎಲ್: ಹೈದರಾಬಾದ್ ಗೆಲುವಿಗೆ ವೇದಿಕೆ ನಿರ್ಮಿಸಿದ ಬಿಗ್ ಥ್ರೀ ಕ್ರಿಕೆಟಿಗರು

ಶನಿವಾರ, 29 ಏಪ್ರಿಲ್ 2017 (07:09 IST)
ಮೊಹಾಲಿ: ಬಿಗ್ ಥ್ರೀ ಬ್ಯಾಟ್ಸ್ ಮನ್ ಗಳು ಸಿಡಿದು ಹೈದರಾಬಾದ್ ಗೆಲುವಿಗೆ ವೇದಿಕೆ ಸೃಷ್ಟಿ ಮಾಡಿದರು. ಉಳಿದ ಕೆಲಸವನ್ನು ಬೌಲರ್ ಗಳು ಮಾಡಿದರು. ಇದರ ಪರಿಣಾಮ ಸನ್ ರೈಸರ್ಸ್ ಹೈದರಾಬಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 26 ರನ್ ಗಳ ಗೆಲುವು ದಾಖಲಿಸಿತು.

 
ಮೊದಲು ಬ್ಯಾಟ್ ಮಾಡಿ ಹೈದರಾಬಾದ್ ಪರ ಶಿಖರ್ ಧವನ್ 77, ಡೇವಿಡ್ ವಾರ್ನರ್ 51 ಮತ್ತು ಕೇನ್ ವಿಲಿಯಮ್ಸನ್ ಔಟಾಗದೆ 54 ರನ್ ಗಳಿಸಿದರು. ಇದರಿಂದಾಗಿ ಹೈದರಾಬಾದ್ ನಿಗಿದತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಪೇರಿಸಿತು.

ನಂತರ ಬ್ಯಾಟ್ ಮಾಡಿದ ಪಂಜಾಬ್ 181 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಶಾನ್ ಮಾರ್ಷ್ 84 ರನ್ ಗಳಿಸಿ ಬಿರುಗಾಳಿಯಂತೆ ಮುನ್ನುಗ್ಗುತ್ತಿರುವುದು ನೋಡಿ ಹೈದರಾಬಾದ್ ಎದೆಯಲ್ಲಿ ನಡುಕ ಹುಟ್ಟಿತ್ತು. ಆದರೆ ಮಾರ್ಷ್ ಅಬ್ಬರಕ್ಕೆ ಭುವನೇಶ್ವರ ಕುಮಾರ್ ಬ್ರೇಕ್ ಹಾಕುವುದರೊಂದಿಗೆ ಹೈದರಾಬಾದ್ ಗೆಲುವು ಸುಲಭವಾಯಿತು.

ಈ ಐಪಿಎಲ್ ಸೀಸನ್ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲೂ ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರಿಗೆ ಆಫ್ಘನ್ ಮೂಲದ ರಶೀದ್ ಖಾನ್ ಉತ್ತಮ ಸಾಥ್ ನೀಡಿದರು. ತವರಿನ ಅಂಗಳದಲ್ಲಿ ಹೈದರಾಬಾದ್ ಪರ ಆಡಿದ ಯುವರಾಜ್ ಸಿಂಗ್ 15 ರನ್ ಗಳಿಸಿ ಅಂತಿಮ ಹಂತದಲ್ಲಿ ಮೊತ್ತ ಉಬ್ಬಲು ನೆರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ