ಕೊನೆಯ ಓವರ್ ವೀರ ಧೋನಿ ಕಣ್ಣೆದುರೇ ಗೆಲುವು ಕೈ ಜಾರಿದ ಗಳಿಗೆ!
ಸೋಮವಾರ, 22 ಮೇ 2017 (09:02 IST)
ಹೈದರಾಬಾದ್: ಧೋನಿ ಅದೆಷ್ಟು ಬಾರಿ ಇಂತಹ ಪಂದ್ಯವನ್ನು ಗೆದ್ದು ಇತಿಹಾಸ ಬರೆದಿಲ್ಲ? ಕೊನೆಯ ಓವರ್ ನ ಗೆಲುವು ಅವರಿಗೆ ನೀರು ಕುಡಿದಷ್ಟೇ ಸುಲಭವಾಗಿತ್ತು. ಆದರೆ ಈ ಐಪಿಎಲ್ ಫೈನಲ್ ನಲ್ಲಿ ಮಾತ್ರ ಹಾಗಾಗಲಿಲ್ಲ.
ಇದಕ್ಕೆಲ್ಲಾ ಕಾರಣವಾಗಿದ್ದು ವೇಗಿ ಜಾನ್ಸನ್. ಗೆಲ್ಲಲು ಎದುರು ಇದ್ದಿದ್ದು ಕೇವಲ 129 ರನ್ ಗಳ ಗುರಿ. ಅಷ್ಟರಲ್ಲೇ ಈ ಪಂದ್ಯ ಪುಣೆ ಪಾಲು ಎಂದೇ ಎಲ್ಲರೂ ಅಂದುಕೊಂಡಿದ್ದರು. 19 ನೇ ಓವರ್ ವರೆಗೂ ಅದು ಹಾಗೇ ಇತ್ತು. ಆದರೆ ಆ ಕೊನೆಯ ಓವರ್ ನಲ್ಲಿ ಪಂದ್ಯವೇ ಬದಲಾಯಿತು.
ಆ ಓವರ್ ನಲ್ಲಿ ಪುಣೆ ಗೆಲುವಿಗೆಗೆ 11 ರನ್ ಮಾಡಿದ್ದರೆ ಸಾಕಿತ್ತು. ಟಿ-20 ಕ್ರಿಕೆಟ್ ನಲ್ಲಿ ಇದು ಅಸಾಧ್ಯವೇನೂ ಅಲ್ಲ. ಮೊದಲ ಬಾಲ್ ನಲ್ಲಿ ಮನೋಜ್ ತಿವಾರಿ ಬೌಂಡರಿ ಗಳಿಸಿದಾಗ ಪುಣೆ ತಂಡ ಗೆಲುವಿನ ಸಂಭ್ರಮಾಚರಿಸಲು ಎದ್ದು ನಿಂತು ರೆಡಿಯಾಗಿತ್ತು.
ಆದರೆ ಮುಂದಿನ ಎರಡು ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಸ್ಟೀವ್ ಸ್ಮಿತ್ ಮತ್ತು ಮನೋಜ್ ತಿವಾರಿ ಔಟಾದರು. ಅಲ್ಲಿಗೆ ಮತ್ತೆ ಮೂರು ಎಸೆತಗಳಲ್ಲಿ ಐದು ರನ್ ಗಳಿಸಬೇಕಾದ ಅನಿವಾರ್ಯತೆಗೆ ಪುಣೆ ಸಿಲುಕಿತು. ಕೊನೆಯ ಎಸೆತದಲ್ಲಿ ಪಂದ್ಯ ಸಮಬಲಗೊಳಿಸಲು ಬೇಕಾಗಿದ್ದ ಮೂರು ರನ್ ಕದಿಯುವ ಭರದಲ್ಲಿ ಡ್ಯಾನ್ ಕ್ರಿಸ್ಟಿಯನ್ ರನೌಟ್ ಆದರು. ಮುಂಬೈ 1 ರನ್ ಗಳಿಂದ ಪಂದ್ಯ ಗೆದ್ದಿತು.
ಮುಂಬೈ ಸಂಭ್ರಮ ಹೇಳತೀರದು. ಇನ್ನಿಲ್ಲದಂತೆ ಕುಣಿದಾಡುತ್ತಿದ್ದರೆ, ಅತ್ತ ಪುಣೆ ಡಗ್ ಔಟ್ ನಲ್ಲಿ ಸ್ಮಶಾನ ಮೌನ. ಮುಂಬೈ ಹುಡುಗರು ಮೂರನೇ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಧೋನಿ ಈ ಪಂದ್ಯದಲ್ಲಿ ಕೇವಲ 10 ರನ್ ಗಳಿಸಿ ಔಟಾದರು. ಆದರೆ ಉಭಯ ತಂಡಗಳ ಬೌಲರ್ ಗಳು ಮಾರಕ ದಾಳಿ ಸಂಘಟಿಸಿ ಮಿಂಚಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ