ಐಪಿಎಲ್: ಮೊದಲ ಪಂದ್ಯದಲ್ಲೇ ಧೋನಿ ದಾಖಲೆ ಮುರಿದ ರಿಷಬ್ ಪಂತ್
ಸೋಮವಾರ, 25 ಮಾರ್ಚ್ 2019 (09:15 IST)
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಈ ವರ್ಷದ ಐಪಿಎಲ್ ಕೂಟದ ಮೊದಲ ಪಂದ್ಯವನ್ನೇ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಚೇತರಿಸಿಕೊಂಡು 6 ವಿಕೆಟ್ ನಷ್ಟಕ್ಕೆ 213 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದಕ್ಕೆ ಕಾರಣವಾಗಿದ್ದ ಡೆಲ್ಲಿ ಡ್ಯಾಶರ್ ರಿಷಬ್ ಪಂತ್ ಸ್ಪೋಟಕ ಬ್ಯಾಟಿಂಗ್. ಯರ್ರಾ ಬಿರ್ರಿ ಬಾಲ್ ಚಚ್ಚಿದ ರಿಷಬ್ ಕೇವಲ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್ ಗಳ ನೆರವಿನಿಂದ ಅಜೇಯ 78 ರನ್ ಬಾರಿಸಿದರು.
ರಿಷಬ್ ಈ ಹೊಡೆಬಡಿಯ ಇನಿಂಗ್ಸ್ ನಿಂದಾಗಿ ಧೋನಿ ಮಾಡಿದ್ದ ದಾಖಲೆಯೊಂದನ್ನು ಮುರಿದರು. ಐಪಿಎಲ್ ನಲ್ಲಿ ಅತೀ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಕೇವಲ 18 ಬಾಲ್ ಗಳಲ್ಲಿ ಪಂತ್ 50 ರನ್ ಸಿಡಿಸಿದರು.
ನಂತರ ಬ್ಯಾಟಿಂಗ್ ಮಾಡಿದ ಮುಂಬೈ 19.2 ಓವರ್ ಗಳಲ್ಲಿ 176 ರನ್ ಗಳಿಗೆ ಆಲೌಟ್ ಆಗುವ ಮೂಲಕ 37 ರನ್ ಗಳಿಂದ ಸೋತಿತು. ಮುಂಬೈ ಪರ ಯುವರಾಜ್ 53 ರನ್ ಗಳಿಸಿದರೆ ಕೃಣಾಲ್ ಪಾಂಡ್ಯ 32 ರನ್ ಗಳಿಸಿದರು.
ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ 6 ವಿಕೆಟ್ ಗಳ ಜಯ ಸಂಪಾದಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. ಹೈದರಾಬಾದ್ ಪರ ಡೇವಿಡ್ ವಾರ್ನರ್ ಸ್ಪೋಟಕ 85 ರನ್ ಸಿಡಿಸಿದರು. ಬಳಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ ನಿತಿನ್ ರಾಣಾ (68), ಆಂಡ್ರೆ ರಸೆಲ್ (49) ಉತ್ತಮ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಕಳೆದುಕೊಂಡು 19.4 ಓವರ್ ಗಳಲ್ಲಿ ಗುರಿ ಮುಟ್ಟಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ