ಐಪಿಎಲ್ 13: ಥ್ರಿಲ್ಲಿಂಗ್ ಗೆಲುವು ದಾಖಲಿಸಿದ ಆರ್ ಸಿಬಿ

ಮಂಗಳವಾರ, 29 ಸೆಪ್ಟಂಬರ್ 2020 (09:05 IST)
ದುಬೈ: ಐಪಿಎಲ್ 13 ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ ನಲ್ಲಿ ಥ್ರಿಲ್ಲಿಂಗ್ ಗೆಲುವು ದಾಖಲಿಸಿದೆ.


ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಆರಂಭಿಕ ದೇವದತ್ತ್ ಪಡಿಕ್ಕಲ್ 54, ಏರಾನ್ ಫಿಂಚ್ 52 ರನ್ ಗಳಿಸಿದರು. ಎಬಿಡಿ ವಿಲಿಯರ್ಸ್ (55 ನಾಟೌಟ್) ಮತ್ತು ಶಿವಂ ದುಬೆ (27 ನಾಟೌಟ್) ಅಂತಿಮ ಓವರ್ ಗಳಲ್ಲಿ ಸಿಡಿದ ಕಾರಣ ಆರ್ ಸಿಬಿ ಮೊತ್ತ 200 ರ ಗಡಿ ದಾಟಿತು. ನಾಯಕ ಕೊಹ್ಲಿ ಮತ್ತೆ 3 ರನ್ ಗೆ ಔಟಾಗುವ ಮೂಲಕ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ಆದರೆ ಸೂಪರ್ ಓವರ್ ನಲ್ಲಿ ತಂಡಕ್ಕೆ ಅಗತ್ಯವಿದ್ದ ಬೌಂಡರಿ ಬಾರಿಸಿ ಗೆಲುವು ದಾಖಲಿಸಲು ನೆರವಾಗುವ ಮೂಲಕ ಆ ನೋವು ಮರೆಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಹಿಟ್ ಮ್ಯಾನ್ ರೋಹಿತ್ ಶರ್ಮಾ 8, ಕ್ವಿಂಟನ್ ಡಿ ಕಾಕ್ 14, ಸೂರ್ಯಕುಮಾರ್ ಶೂನ್ಯಕ್ಕೆ ನಿರ್ಗಮಿಸಿದಾಗ ಆರ್ ಸಿಬಿ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಕೆಳ ಕ್ರಮಾಂಕದಲ್ಲಿ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 99 ರನ್ ಗಳಿಗೆ ಔಟಾದರು. ಇನ್ನೊಂದೆಡೆ ವಿಂಡೀಸ್ ದೈತ್ಯ ಕಿರಾನ್ ಪೊಲ್ಲಾರ್ಡ್ 24 ಎಸೆತದಲ್ಲಿ 60 ರನ್ ಚಚ್ಚಿ ತಂಡವನ್ನು ಸುಸ್ತಿಗೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ಪೊಲ್ಲಾರ್ಡ್ ನಾಲ್ಕು ರನ್ ಗಳಿಸಿದರು. ಹೀಗಾಗಿ ಪಂದ್ಯ ಟೈ ಆಯಿತು.

ಬಳಿಕ ಸೂಪರ್ ಓವರ್ ನಡೆಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 1 ವಿಕೆಟ್ ಕಳೆದುಕೊಂಡು 7 ರನ್ ಗಳಿಸಿ ಗೆಲುವಿಗೆ 8 ರನ್ ಗಳ ಗುರಿ ನೀಡಿತು. ಆರ್ ಸಿಬಿ ಪರ ಎಬಿಡಿ ವಿಲಿಯರ್ಸ್ ಮತ್ತು ಕೊಹ್ಲಿ ಬ್ಯಾಟಿಂಗ್ ಗೆ ಬಂದರು. ಕೊನೆಯ ಎಸೆತದಲ್ಲಿ ಕೊಹ್ಲಿ ಬೌಂಡರಿ ಗಳಿಸಿದಾಗ ಆರ್ ಸಿಬಿ ಮೊತ್ತ 11 ರನ್ ಗಳಾಯಿತು. ಇದರೊಂದಿಗೆ ಥ್ರಿಲ್ಲಿಂಗ್ ಜಯ ಕೈವಶವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ