ಆರ್‌ಸಿಬಿ ಬ್ಯಾಟಿಂಗ್ , ಸನ್‌ರೈಸರ್ಸ್ ಬೌಲಿಂಗ್ ನಡುವೆ ಸಮರ

ಶನಿವಾರ, 28 ಮೇ 2016 (20:13 IST)
ಬೆಂಗಳೂರು:  ವಿರಾಟ್ ಕೊಹ್ಲಿ ಅವರ ಸ್ಫೂರ್ತಿಯ ನಾಯಕತ್ವ ಮತ್ತು ಡೇವಿಡ್ ವಾರ್ನರ್ ಅವರು ಸನ್ ರೈಸರ್ಸ್ ತಂಡವನ್ನು ಫೈನಲ್ಸ್‌ಗೆ ಮುಟ್ಟಿಸಿದ ನಿರ್ದಯತೆಯ ಶಕ್ತಿಯ ನಡುವೆ ಅಧಿಕ ತೀವ್ರತೆಯ ಹಣಾಹಣಿ ನಾಳೆ ಎದುರಾಗಲಿದೆ. ಆರ್‌ಸಿಬಿ 2009 ಮತ್ತು 2011ರಲ್ಲಿ ಐಪಿಎಲ್ ಫೈನಲ್‌ನಲ್ಲಿ ಎರಡು ಬಾರಿ ಆಡಿದ ಅನುಭವ ಹೊಂದಿದೆ. ಎರಡು ಬಾರಿಯೂ ರನ್ನರ್ಸ್ ಅಪ್ ಆಗಿತ್ತು.  ಸನ್‌ರೈಸರ್ಸ್ ಪ್ಲೇ ಆಫ್ ಸ್ಥಾನ ಪ್ರವೇಶಿಸಿದ್ದು ಬಿಟ್ಟರೆ ಉತ್ತಮ ಸಾಧನೆ ತೋರಿರಲಿಲ್ಲ.

 ಆರ್‌ಸಿಬಿ ಲೀಗ್‌ನ ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದು, ಪ್ಲೇ ಆಫ್ ಪ್ರವೇಶಕ್ಕೆ ಕೊನೆಯ ನಾಲ್ಕು ಪಂದ್ಯಗಳನ್ನೂ ಗೆಲ್ಲಬೇಕಿತ್ತು. ಬೆಂಗಳೂರು ತಂಡ ಅದನ್ನು ಸಾಧಿಸಿದ್ದಲ್ಲದೇ ನೇರ ಜಯದ ಮೂಲಕ ಫೈನಲ್ ಪ್ರವೇಶಿಸಿತು.  ಕೊಹ್ಲಿ  ತಂಡದಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಆತ್ಮವಿಶ್ವಾಸ ತುಂಬಿದರು. ಆರ್‌ಸಿಬಿಗೆ ಪ್ಲೇಆಫ್ ದೂರದ ಕನಸಾಗಿದ್ದಾಗ ಕೊಹ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮತ್ತು ನಾಯಕತ್ವದ ಗುಣಗಳಿಂದ ಸಾಧ್ಯವಾಗಿಸಿದರು. 

 ನಾಳೆಯ ಪಂದ್ಯವು ಆರ್‌ಸಿಬಿಗೆ ಕಳೆದ ಪಂದ್ಯದಲ್ಲಿ 15 ರನ್‌ಗಳಿಂದ ಸೋತ ಸೇಡನ್ನು ತೀರಿಸಿಕೊಳ್ಳುವ ಅವಕಾಶವಾಗಿದೆ.  ಆರ್‌ಸಿಬಿ ರೀತಿಯಲ್ಲಿ ಸನ್ ರೈಸರ್ಸ್ ಕೂಡ ನಾಯಕ ವಾರ್ನರ್ ಮೇಲೆ ಅವಲಂಬಿತವಾಗಿದೆ. ಸನ್‌ರೈಸರ್ಸ್ ಎರಡು ಅತೀ ಪ್ರಮುಖ ಗೆಲುವುಗಳ ನಂತರ ಫೈನಲ್ ಪ್ರವೇಶಿಸಿದೆ. 
 
 ವಾರ್ನರ್ ಸ್ಫೋಟಕ ರೂಪದಲ್ಲಿದ್ದು, 16 ಪಂದ್ಯಗಳಿಂದ 779 ರನ್ ಕೂಡಿಸಿದ್ದು, ಅದರಲ್ಲಿ 8 ಅರ್ಧಶತಕಗಳು ಸೇರಿವೆ.  ಪಂದ್ಯ ಗೆಲುವಿನ ಅಜೇಯ 93 ರನ್ ಅವರ ಅತ್ಯಧಿಕ ಸ್ಕೋರಾಗಿದೆ.
 
 ವಾರ್ನರ್ ಅವರಲ್ಲದೇ ಶಿಖರ್ ಧವನ್, ಯುವರಾಜ್ ಸಿಂಗ್, ಹೆನ್ರಿಕ್ಸ್ ಬ್ಯಾಟಿಂಗ್ ಬಲ ತುಂಬಿದ್ದಾರೆ. ಆದರೆ ಸನ್‌ರೈಸರ್ಸ್ ಬೌಲಿಂಗ್ ತಂಡಕ್ಕೆ ಚಿನ್ನವನ್ನು ದಕ್ಕಿಸಿಕೊಟ್ಟಿದೆ. ನಾಳೆಯ ಪಂದ್ಯ ಆರ್‌ಸಿಬಿ ಬ್ಯಾಟಿಂಗ್ ಮತ್ತು ಸನ್‌ರೈಸರ್ಸ್ ಬೌಲಿಂಗ್ ಎಂದರೆ ತಪ್ಪಾಗಲಾರದು. ಭುವನೇಶ್ವರ್ ಕುಮಾರ್, ಬೌಲ್ಟ್, ಮುಸ್ತಫಿಜುರ್ ರೆಹ್ಮಾನ್ ಬೌಲಿಂಗ್ ಶಕ್ತಿಯನ್ನು ತುಂಬಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ