ಆರ್‌ಸಿಬಿಗೆ ಸಾರಥಿಯಾಗುವಂತೆ ಪಾಟೀದಾರ್‌ಗೆ ವರ್ಷದ ಹಿಂದೆಯೇ ಸುಳಿವು ನೀಡಿದ್ದ ಫ್ಲವರ್‌

Sampriya

ಗುರುವಾರ, 13 ಫೆಬ್ರವರಿ 2025 (21:09 IST)
Photo Courtesy X
ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕನಾಗಿ ಆಯ್ಕೆಯಾಗಿರುವ ರಜತ್‌ ಪಾಟೀದರ್‌ ಅವರಿಗೆ ವರ್ಷದ ಹಿಂದೇ ಸಾರಥಿಯಾಗುವ ಸುಳಿವನ್ನು ನೀಡಲಾಗಿತ್ತು. ಈ ಕುರಿತು ಅವರೇ ಸ್ಪಷ್ಟಪಡಿಸಿದ್ದಾರೆ.

ಆರ್‌ಸಿಬಿ ತಂಡಕ್ಕೆ ಗುರುವಾರ ರಜತ್ ಪಾಟಿದಾರ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಮತ್ತೆ ತಂಡದ ನಾಯಕನಾಗುತ್ತಾರೆ ಎಂದು ಊಹಿಸಲಾಗಿತ್ತು. ಆದರೆ, 31 ವರ್ಷದ ರಜತ್ ಪಾಟಿದಾರ್‌ ಅವರಿಗೆ ಮಣೆ ಹಾಕಲಾಗಿದೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ರಿಟೇಟ್‌ ಆಟಗಾರರಲ್ಲಿ ರಜತ್ ಪಾಟಿದಾರ್ ಕೂಡ ಒಬ್ಬರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿರುವ ಅನುಭವ ಅವರಿಗಿದೆ.

ರಜತ್ ಪಾಟೀದಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಪಿಎಲ್ 2024ರಲ್ಲಿಯೇ ತಂಡದ ಕೋಚ್ ಆಂಡಿ ಫ್ಲವರ್ ನನ್ನನ್ನು ಆರ್‌ಸಿಬಿ ನಾಯಕನಾಗಲು ಬಯಸುತ್ತೀರಾ ಎಂದು ಕೇಳಿದ್ದರು. ನನ್ನ ರಾಜ್ಯ ಮಧ್ಯಪ್ರದೇಶ ತಂಡವನ್ನು ದೇಶೀಯ ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸುವ ಮೂಲಕ ಬಹಳಷ್ಟು ಕಲಿಯಲು ಬಯಸುತ್ತೇನೆ. ಆಗ ಮಾತ್ರ ನಾನು ನಾಯಕನಾಗಬಲ್ಲೆ ಎಂದು ಕೋಚ್‌ಗೆ ಹೇಳಿದ್ದೆ. ಅಂದೇ ನನಗೆ ಆರ್‌ಸಿಬಿ ತಂಡದ ನಾಯಕನಾಗುವ ಸುಳಿವು ದೊರಕಿತ್ತು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ