IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್‌ ಎಂಟ್ರಿ

Sampriya

ಬುಧವಾರ, 21 ಮೇ 2025 (23:57 IST)
Photo Courtesy X
ಮುಂಬೈ: ಐದು ಬಾರಿಯ ಚಾಂಪಿಯನ್‌ ಮುಂನೈ ಇಂಡಿಯಲ್ಸ್‌ ತಂಡವು ಹಾಲಿ ಐಪಿಎಲ್‌ ಆವೃತ್ತಿಯಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಹಾಕಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗುಜರಾತ್‌ ಟೈಟನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಈ ಮೊದಲು ಪ್ಲೇ ಆಫ್‌ಗೆ ಮುನ್ನಡೆದಿದ್ದವು. ನಾಲ್ಕನೇ ಸ್ಥಾನಕ್ಕಾಗಿ ಡೆಲ್ಲಿ ಮತ್ತು ಮುಂಬೈ ತಂಡಗಳ ಕಾದಾಟದಲ್ಲಿ ಮುಂಬೈ ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.

ಬುಧವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಜಸ್‌ಪ್ರೀತ್‌ ಬೂಮ್ರಾ, ಮಿಚೇಲ್‌ ಸ್ಯಾಂಟ್ನರ್‌ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 59ರನ್‌ ಅಂತರದ ಜಯ ಸಾಧಿಸಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ ಕಲೆಹಾಕಿತ್ತು. ಸೂರ್ಯಕುಮಾರ್‌ ಯಾದವ್‌ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 73 ರನ್‌ ಬಾರಿಸಿ ಅಜೇಯವಾಗಿ ಉಳಿದರು.

ನಂತರ ಈ ಗುರಿ ಬೆನ್ನತ್ತಿದ ಡೆಲ್ಲಿ, 18.2 ಓವರ್‌ಗಳಲ್ಲಿ 121 ರನ್‌ ಗಳಿಸಿ ಸರ್ವಪತನ ಕಂಡಿತು. ಸಮೀರ್‌ ರಿಜ್ವಿ 39 ರನ್‌ ಗಳಿಸಿದ್ದನ್ನು ಬಿಟ್ಟರೆ, ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ, ಡೆಲ್ಲಿ ಪಡೆ ಪ್ಲೇ ಆಫ್‌ ತಲುಪುವ ಅವಕಾಶವನ್ನು ಕೈಚೆಲ್ಲಬೇಕಾಯಿತು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ