IPL 2025: ಜಿತೇಶ್‌ ಅಬ್ಬರಕ್ಕೆ ಬೆಚ್ಚಿದ ಪಂತ್‌ ಪಡೆ: ದಾಖಲೆಯ ಗೆಲುವಿನೊಂದಿಗೆ ಕ್ವಾಲಿಫೈಯರ್‌ 1ಕ್ಕೆ ಲಗ್ಗೆಯಿಟ್ಟ ಆರ್‌ಸಿಬಿ

Sampriya

ಬುಧವಾರ, 28 ಮೇ 2025 (00:15 IST)
Photo Courtesy X
ಲಖನೌ: ಹಂಗಾಮಿ ನಾಯಕ ಜಿತೇಶ್‌ ಶರ್ಮಾ ಅವರ ಅಮೋಘ ಆಟದ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಖನೌ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧ 6 ವಿಕೆಟ್‌ಗಳ ದಾಖಲೆಯ ಜಯ ಸಾಧಿಸಿದೆ. ಈ ಮೂಲಕ 18ನೇ ಆವೃತ್ತಿಯ ಲೀಗ್‌ ಪಂದ್ಯಗಳನ್ನು ಮುಗಿಸಿದ್ದು, ಬೆಂಗಳೂರು ತಂಡವು ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಪಡೆದಿದೆ.

ಗುರುವಾರ ನಡೆಯುವ ಕ್ವಾಲಿಫೈಯರ್‌ 1ರಲ್ಲಿ ಆರ್‌ಸಿಬಿ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಶುಕ್ರವಾರ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್‌ ಟೈಟನ್ಸ್‌ ವಿರುದ್ಧ ಸೆಣಸಲಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಖನೌ ತಂಡ ರಿಷಭ್‌ ಪಂತ್‌ ಅವರ ಅಮೋಘ ಅಜೇಯ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ ಎಂಟು ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ಗೆ 230 ರನ್‌ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್‌ ಮಾಡಿದ ದಾಖಲೆಯನ್ನೂ ಬರೆದಿದೆ. ಅಲ್ಲದೆ, ಐಪಿಎಲ್‌ ಇತಿಹಾಸದಲ್ಲೇ ಇದು ಮೂರನೇ ಗರಿಷ್ಠ ರನ್‌ ಯಶಸ್ವಿ ಚೇಸಿಂಗ್‌ ಆಗಿದೆ.

228 ರನ್‌ಗಳ ಗುರಿ ಪಡೆದ ಆರಂಭದಲ್ಲೇ ಆರ್‌ಸಿಬಿ ಬಿರುಸಿನ ಆಟಕ್ಕೆ ಮುಂದಾಯಿತು. ಮೊದಲ ವಿಕೆಟಿಗೆ ವಿರಾಟ್‌ ಕೊಹ್ಲಿ ಮತ್ತು ಸಾಲ್ಟ್‌ ಜೋಡಿ 34 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತು. ಫಿಲ್‌ ಸಾಲ್ಟ್‌ 19 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿತಗೊಂಡಿತ್ತು. ಅಲ್ಲದೇ ರಜತ್‌ ಪಾಟೀದಾರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಬೇಗನ ವಿಕೆಟ್‌ ಒಪ್ಪಿಸಿದರು. ವಿರಾಟ್‌ ಕೊಹ್ಲಿ 54 ರನ್‌ (30 ಎಸೆತ, 10 ಬೌಂಡರಿ) ಗಳಿಸಿ, ಈ ಐಪಿಎಲ್‌ನಲ್ಲಿ ಎಂಟನೇ ಅರ್ಧಶತಕ ದಾಖಲಿಸಿದರು. ಜೊತೆಗೆ ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ 63ನೇ ಅರ್ಧಶತಕ ಇದಾಗಿದೆ.

ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್‌ ಶರ್ಮಾ ಮತ್ತು ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್‌ ಬಾರಿಸಿತು. ಇದು ತಂಡದ ಗೆಲುವನ್ನು ನಾಂದಿ ಹಾಡಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 33 ಎಸೆತಗಳಲ್ಲಿ 85 ರನ್‌ (6 ಸಿಕ್ಸರ್‌, 8 ಬೌಂಡರಿ) ಬಾರಿಸಿದರು. ಕನ್ನಡಿಗ ಮಯಾಂಕ್‌  41 ರನ್‌ (23 ಎಸೆತ, 5 ಬೌಂಡರಿ) ಕೂಡ ಉಪಯುಕ್ತ ಕಾಣಿಕೆ ನೀಡಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸವಾಲಿನ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ) ಗಳಿಸಿದರೆ, ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ) ಆಕರ್ಷಕ ಅರ್ಧಶತಕ ಬಾರಿಸಿದರು.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ