ಹೈದರಾಬಾದ್: ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಮತ್ತೆ ಅಬ್ಬರಿಸಿದರು. ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ಐಪಿಎಲ್‌ನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು.
ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 144 ರನ್‌ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 15.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 146 ಗಳಿಸಿದೆ. ರೋಹಿತ್ ಶರ್ಮಾ 70 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ ಅಜೇಯ 41 ರನ್ ಗಳಿಸಿದರು.
ಈ ಗೆಲುವಿನಿಂದಿಗೆ ಮುಂಬೈ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ತವರು ನೆಲದಲ್ಲಿಯೇ ಹೈದರಾಬಾದ್ ತಂಡ ಮತ್ತೆ ಸೋಲನ್ನು ಅನುಭವಿಸಿದೆ.
ಹೆನ್ರಿಚ್ ಕ್ಲಾಸೆನ್ ದಿಟ್ಟ ಹೋರಾಟದ (71) ಹೊರತಾಗಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಟ್ರಾವಿಸ್ ಹೆಡ್ (0), ಅಭಿಷೇಕ್ ಶರ್ಮಾ (8), ಇಶಾನ್ ಕಿಶನ್ (1), ನಿತೀಶ್ ಕುಮಾರ್ (2), ಅನಿಕೇತ್ ಶರ್ಮಾ (12) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ 35ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟ್ರಂಟ್ ಬೌಲ್ಟ್ ನಾಲ್ಕು ವಿಕೆಟ್ ಪಡೆದರು.