ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣವು ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ವಾಲಿಫೈಯರ್ 2ಕ್ಕೆ ಆಖಾಢ ರೆಡಿಯಾಗಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಪಂಜಾಗ್ ಕಿಂಗ್ಸ್ ತಂಡಗಳು ಇಂದು ಸಂಜೆ ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಮಂಗಳವಾರ ಫೈನಲ್‌ನಲ್ಲಿ ಸೆಣಸುವ ಟಿಕೆಟ್ ಪಡೆಯಲಿದೆ. ಆರ್‌ಸಿಬಿ ತಂಡವು ಈಗಾಗಲೇ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.
ಐಪಿಎಲ್‌ನಲ್ಲಿ ಪಂಜಾಬ್ ಹಾಗೂ ಮುಂಬೈ ಈತನಕ ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ 17 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ 16 ಬಾರಿ ಗೆಲುವು ಸಾಧಿಸಿದೆ. ಪಂಜಾಬ್ ತಂಡ ಈತನಕ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಿರೀಟಧಾರಣೆಯ ತವಕದಲ್ಲಿದೆ.
ಮುಂಬೈ ತಂಡದಲ್ಲಿ ಬಲಾಢ್ಯರ ದಂಡೇ ಇದೆ. ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸಲಿದ್ದು, ದೊಡ್ಡ ಮೊತ್ತಕ್ಕೆ ಈ ಜೋಡ ಭದ್ರ ಅಡಿಪಾಯ ಒಡ್ಡುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಈ ಬಾರಿ ಫಾರ್ಮ್ ಸಾಬೀತು ಮಾಡಿದ್ದಾರೆ.
ಪಂಜಾಬ್‌ನಲ್ಲೂ ಶ್ರೇಯಸ್ ಅಯ್ಯರ್, ಪ್ರಿಯಾಂಶ್ ಆರ್ಯ, ಸ್ಟೋಯಿನಿಸ್, ಶಶಾಂಕ್ ಸಿಂಗ್ ಅವರಂತಹ ಬ್ಯಾಟಿಂಗ್ ಪಡೆಯೇ ಇದೆ. ಆದರೆ, ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಎದುರು ಹೀನಾಯವಾಗಿ ಸೋಲು ಕಂಡಿದ್ದ ಕಿಂಗ್ಸ್, ಪುಟಿದೇಳುವ ಛಲದಲ್ಲಿದೆ.