ಗೆಲ್ಲಬಹುದಾಗಿದ್ದ ಪಂದ್ಯ ಕೈಚೆಲ್ಲಿದ ಆರ್‌ಸಿಬಿ: ಸನ್ ರೈಸರ್ಸ್ ಐಪಿಎಲ್ ಚಾಂಪಿಯನ್

ಸೋಮವಾರ, 30 ಮೇ 2016 (00:26 IST)
‌ಬೆಂಗಳೂರು: ರಾಯಲ್ ಚಾಲೆಂಜರ್ಸ್ ತಂಡವು ಐಪಿಎಲ್ ಫೈನಲ್‌ನಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು 8 ರನ್‌ಗಳಿಂದ ಸೋತಿದೆ. ಇದರಿಂದ ಮೂರನೇ ಬಾರಿಗೆ ಫೈನಲ್ ಸೋಲನ್ನು ಅನುಭವಿಸಿದೆ.  ಸನ್‌ರೈಸರ್ಸ್ ಹೈದರಾಬಾದ್ ರ ತಂಡವು ಮೊಟ್ಟಮೊದಲ ಬಾರಿಗೆ ಐಪಿಎಲ್ 2016ರ ಚಾಂಪಿಯನ್ ಆಗಿ ಉದಯಿಸುವ ಮೂಲಕ ಸಂಭ್ರಮಿಸಿತು. 
 
ರಾಯಲ್ ಚಾಲೆಂಜರ್ಸ್ ತಂಡಕ್ಕೆ ಹೋಮ್ ಪಿಚ್‌ನಲ್ಲಿ ಐಪಿಎಲ್ ಚಾಂಪಿಯನ್ ಆಗುವ ಅವಕಾಶ ಸುಲಭವಾಗಿ ಒದಗಿ ಬಂದಿತ್ತು. ಒಂದು ಹಂತದಲ್ಲಿ ರಾಯಲ್ ಚಾಲೆಂಜರ್ಸ್ 10 ಓವರುಗಳಲ್ಲಿ ಯಾವ ವಿಕೆಟ್ ಬೀಳದೇ 112 ರನ್ ಸ್ಕೋರ್ ಮಾಡಿತ್ತು. ಕ್ರಿಸ್ ಗೇಲ್ ಮತ್ತು ಕೊಹ್ಲಿ ಶತಕದ ಜತೆಯಾಟದ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ಗೇಲ್ 38 ಎಸೆತಗಳಲ್ಲಿ 78 ರನ್ ಸಿಡಿಸಿದ್ದು, ಅದರಲ್ಲಿ 8 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳಿದ್ದವು.
 

ಆದರೆ ಗೇಲ್ ಬೆನ್ ಕಟಿಂಗ್ ಬೌಲಿಂಗ್‌ನಲ್ಲಿ ಬಿಪುಲ್ ಶರ್ಮಾಗೆ ಕ್ಯಾಚಿತ್ತು ಔಟಾದ ಮೇಲೆ ಕೊಹ್ಲಿ  ಕೂಡ  ಸ್ವಲ್ಪ ಹೊತ್ತಿನಲ್ಲೇ  ಔಟಾದಾಗ ಕ್ರೀಡಾಂಗಣದಲ್ಲಿ ನೀರವ ಮೌನ ಆವರಿಸಿತು. 
 
ಕೊಹ್ಲಿ ಬರೀಂದರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದಾಗ ಅವರ ಸ್ಕೋರು 54 ರನ್‌ಗಳಾಗಿತ್ತು. ನಂತರ ಆಡಲಿಳಿದ ಸ್ಫೋಟಕ
ಬ್ಯಾಟ್ಸ್ ಮನ್ ಡಿ ವಿಲಿಯರ್ಸ್ ಮೇಲೆ ಅಭಿಮಾನಿಗಳ ಭರವಸೆಯಿತ್ತು.

ಆದರೆ ಡಿ ವಿಲಿಯರ್ಸ್ ಹೆನ್ರಿಕ್  ಬೌಲಿಂಗ್‌ನಲ್ಲಿ ಬಿಪುಲ್ ಶರ್ಮಾಗೆ ಕ್ಯಾಚಿತ್ತು ಔಟಾದಾಗ ಆರ್ ಸಿಬಿ ಹಣೆಬರಹ ಬದಲಾಯಿತು. ಡಿ ವಿಲಿಯರ್ಸ್ ಹಿಂದಿನ ಪಂದ್ಯದಂತೆ ಆಡಿದ್ದರೆ ಆರ್‌ಸಿಬಿಗೆ ಸುಲಭ ಗೆಲುವು ದಕ್ಕುತ್ತಿತ್ತು. ಇದಾದ ಬಳಿಕ ಸನ್ ರೈಸರ್ಸ್ ಮತ್ತಷ್ಟು ಬಿಗಿ ಬೌಲಿಂಗ್ ಮಾಡಿ ರನ್ ನಿಯಂತ್ರಿಸಿತು. ಸ್ಟುವರ್ಟ್ ಬಿನ್ನಿ, ಜೋರ್ಡಾನ್ ರನ್ ಔಟ್ ಆಗಿದ್ದು ಕೂಡ ಆರ್‌ಸಿಬಿಗೆ ದುಬಾರಿಯಾಗಿ ಪರಿಣಮಿಸಿತು.

17ನೇ ಓವರಿನಲ್ಲಿ ಶೇನ್ ವಾಟ್ಟನ್  ಮುಸ್ತಫಿಜುರ್ ಬೌಲಿಂಗ್‌ನಲ್ಲಿ ಹೆನ್ರಿಕ್ಸ್‌ಗೆ ಕ್ಯಾಚಿತ್ತು ಔಟಾದರು. ಡೆತ್ ಓವರುಗಳಲ್ಲಿ ಸನ್ ರೈಸರ್ಸ್ ತಂಡದ ಭುವನೇಶ್ವರ್ ಕುಮಾರ್ ಮತ್ತು ಮುಸ್ತಫಿಜುರ್ ಬಿಗಿ ಬೌಲಿಂಗ್‌ನಿಂದ ಆರ್‌ಸಿಬಿ ಆಟಗಾರರು ತಿಣುಕಾಡಿ  200 ರನ್ ಗಳಿಸಲು ಮಾತ್ರ ಸಾಧ್ಯವಾಗಿ ಸೋಲಪ್ಪಿತು.

ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ಸನ್ ರೈಸರ್ಸ್ ಪರ ನಾಯಕ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 69 ರನ್ ಸಿಡಿಸಿದ್ದರು. ಬೆನ್ ಕಟ್ಟಿಂಗ್ ಕೊನೆಯ ಓವರುಗಳಲ್ಲಿ ಬಿರುಸಿನ ಆಟವಾಡಿದ್ದು ಸನ್ ರೈಸರ್ಸ್‌ಗೆ  ವರವಾಗಿ ಪರಿಣಮಿಸಿತು. ಸನ್ ರೈಸರ್ಸ್ 7 ವಿಕೆಟ್‌ಗೆ 208 ರನ್ ಸ್ಕೋರ್ ಮಾಡಿತ್ತು. ಒಂದು ಹಂತದಲ್ಲಿ 147  ರನ್‌ಗಳಿಗೆ 16.1 ಓವರುಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆರ್‌ಸಿಬಿ ಬೌಲರುಗಳು ಬಿಗಿಯಾದ ಬೌಲಿಂಗ್ ಮಾಡಿದ್ದರೆ ರನ್ ವೇಗ ನಿಯಂತ್ರಿಸಬಹುದಿತ್ತು. ಬೆನ್ ಕಟ್ಟಿಂಗ್ ಅಬ್ಬರವನ್ನು ನಿಯಂತ್ರಿಸಲು ಸಾಧ್ಯವಿತ್ತು.  ಕೊನೆಯ 23 ಎಸೆತಗಳಲ್ಲಿ 63 ಕೊಟ್ಟಿದ್ದು ದುಬಾರಿಯಾಗಿ ಪರಿಣಮಿಸಿತು. ಸನ್ ರೈಸರ್ಸ್ ಗೆದ್ದ ಮೇಲೆ ಆಕಾಶದೆತ್ತರಕ್ಕೆ ಹಾರಿದ ಸಿಡಿಮದ್ದಿನ ಸದ್ದಿನಲ್ಲಿ ಕೊಹ್ಲಿ ಬಳಗದ ಐಪಿಎಲ್ ಚಾಂಪಿಯನ್ ಆಗುವ ಕನಸು ಕರಗಿಹೋಯಿತು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ

ವೆಬ್ದುನಿಯಾವನ್ನು ಓದಿ