ಸಕಾಲದಲ್ಲಿ ಮಿಂಚಿದ ಯುವಿ: ಸನ್‌‍ರೈಸರ್ಸ್‌ಗೆ ಎಲಿಮಿನೇಟರ್‌ನಲ್ಲಿ 22 ರನ್ ಜಯ

ಗುರುವಾರ, 26 ಮೇ 2016 (11:11 IST)
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಚಿನ ಲೀಗ್ ಪಂದ್ಯಗಳಲ್ಲಿ ಸೋತಿದ್ದ ಸನ್‌ರೈಸರ್ಸ್ ತಂಡ ಎಲಿಮಿನೇಟರ್‌ನಲ್ಲಿ 22 ರನ್‌ಗಳಿಂದ ಜಯಗಳಿಸುವ ಮೂಲಕ ಸೇಡು ತೀರಿಸಿಕೊಂಡಿದೆ. ಸನ್ ರೈಸರ್ಸ್ 162 ರನ್‌ಗೆ ಪ್ರತಿಯಾಗಿ ನೈಟ್ ರೈಡರ್ಸ್ 140 ರನ್ ಸ್ಕೋರ್ ಮಾಡಿತು. ಸನ್ ರೈಸರ್ಸ್ ಬಿಗಿಯಾದ ಫೀಲ್ಡಿಂಗ್ ಮತ್ತು ಬೌಲಿಂಗ್ ನೆರವಿನಿಂದ ಈ ಪಂದ್ಯವನ್ನು ಗೆದ್ದುಕೊಂಡು ನೈಟ್ ರೈಡರ್ಸ್ ತಂಡವನ್ನು ಹೊರದಬ್ಬಿದೆ.
 
ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ಡೇವಿಡ್ ವಾರ್ನರ್ 28 ರನ್ ಮ‌ತ್ತು ಯುವರಾಜ್ ಸಿಂಗ್ ಅವರ 44 ರನ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 162 ಸ್ಕೋರ್ ಮಾಡಿತ್ತು.  ಯುವರಾಜ್ ಸಿಂಗ್ ಸಕಾಲದಲ್ಲಿ ಮಿಂಚಿ 30 ಎಸೆತಗಳಲ್ಲಿ 44 ರನ್ ಸಿಡಿಸಿದರು. ಅವರ ಸ್ಕೋರಿನಲ್ಲಿ  8 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು. ಕುಲದೀಪ್ ಯಾದವ್ 3 ವಿಕೆಟ್ ಮತ್ತು ಮಾರ್ಕೆಲ್ ಹಾಗೂ ಹೋಲ್ಡರ್ ತಲಾ 2  ವಿಕೆಟ್ ಕಬಳಿಸಿದ್ದರು.  ನೈಟ್ ರೈಡರ್ಸ್ ಪರ ಉತ್ತಪ್ಪಾ ಎರಡನೇ ಓವರಿನಲ್ಲಿ ಬರೀಂದರ್ ಬೌಲಿಂಗ್ ನಲ್ಲಿ  ಹೆನ್ರಿಕ್ಸ್‌ಗೆ ಕ್ಯಾಚಿತ್ತು ಔಟಾದರು.
 
ಬಳಿಕ ಮನ್ರೋ ಮತ್ತು ಗಂಭೀರ್ ಉತ್ತಮ ಜತೆಯಾಟವಾಡಿದರೂ ಹೆನ್ರಿಕ್ಸ್  ಬೌಲಿಂಗ್‌ನಲ್ಲಿ ಗಂಭೀರ್ ರನ್ ಓಡಿದಾಗ ಮನ್ರೋ ರನ್ ಔಟ್ ಆದರು. ಯುವರಾಜ್ ವಿಕೆಟ್‌ಗೆ ಗುರಿಇಟ್ಟು ಹೊಡೆದು ಮನ್ರೋರನ್ನು ರನೌಟ್ ಮಾಡಿದರು.  ಗಂಭೀರ್ ಬೆನ್ ಕಟ್ಟಿಂಗ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟಾದರು. 
 
ಮನಿಷ್ ಪಾಂಡೆ ಸೂರ್ಯಕುಮಾರ್ ಯಾದವ್ ಜತೆಗೂಡಿ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರಾದರೂ ಸೂರ್ಯಕುಮಾರ್ ಯಾದವ್ ಔಟಾದ ಮೇಲೆ ರನ್ ವೇಗ ಕುಸಿಯಿತು. ಬಳಿಕ ಮನೀಶ್ ಪಾಂಡೆ ಕೂಡ ಭುವನೇಶ್ವರ್ ಎಸೆತದಲ್ಲಿ ಹೂಡಾಗೆ ಕ್ಯಾಚಿತ್ತು   ಔಟಾದರು. ಹೆನ್ರಿಕ್ಸ್ 2 ವಿಕೆಟ್ ಮತ್ತು ಭುವನೇಶ್ವರ ಕುಮಾರ್ 3 ವಿಕೆಟ್ ಕಬಳಿಸಿದರು. ಈಗ ಸನ್ ರೈಸರ್ಸ್ ತಂಡವು  ಗುಜರಾತ್ ಲಯನ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯವಾಡಲಿದೆ. ಅದರಲ್ಲಿ ವಿಜೇತವಾದ ತಂಡವು ಆರ್‌ಸಿಬಿ ವಿರುದ್ಧ  ಫೈನಲ್ಸ್ ಪಂದ್ಯವಾಡಲಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ