ಸರ್. ಎಂ.ವಿ. ಜನ್ಮದಿನ; ಇಂಜಿನಿಯರ್ಸ್ ಡೇ

ಮಂಗಳವಾರ, 15 ಸೆಪ್ಟಂಬರ್ 2009 (12:01 IST)
ಕನ್ನಂಬಾಡಿ ಆಣೆಕಟ್ಟು, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸಾಬೂನು ಕಾರ್ಖಾನೆ ಸ್ಥಾಪನೆಗಳ ಮೂಲಕ ದೇಶದ ಅಗ್ರಗಣ್ಯ ಎಂಜಿನಿಯರ್‌ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ 149ನೇ ಜನ್ಮದಿನವನ್ನು(ಸೆ.15)ರಾಜ್ಯದೆಲ್ಲೆಡೆ 'ಇಂಜಿನಿಯರ್ಸ್ ಡೇ' ಎಂದು ಆಚರಿಸಲಾಗುತ್ತಿದೆ.

ಮೋಕ್ಷಗುಂಡಂ ವಿಶ್ವೇಶ್ವರಯ್ಯ( 1861, ಸೆಪ್ಟೆಂಬರ್ 15ರಂದು ಜನನ, 1962,ಏಪ್ರಿಲ್ 12ರಂದು ನಿಧನ) ಸರ್ ಎಂ.ವಿ ಎಂದೇ ಜನಪ್ರಿಯರಾಗಿದ್ದರು. ವಿಶ್ವೇಶ್ವರಯ್ಯನವರು ಮುದ್ದೇನಹಳ್ಳಿಯಲ್ಲಿ ಜನಿಸಿದ್ದರು. ಅವರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಮತ್ತು ಬೆಂಗಳೂರಿನಲ್ಲಿ ಪ್ರೌಢಶಿಕ್ಷಣ ಪಡೆದಿದ್ದರು. 1881ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು.

ಮುಂಬೈ ನಗರದಲ್ಲಿ ಲೋಕೋಪಯೋಗಿ ಇಲಾಖೆ ಸೇರಿ ಸೇವೆ ಸಲ್ಲಿಸಿದ್ದರು. ಆಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡುಹಿಡಿದು ಅದಕ್ಕಾಗಿ ಪೇಟೆಂಟ್ ಪಡೆದರು. ಹಲವಾರು ಜನಹಿತ ಸೇವೆಗಳ ಮೂಲಕ ದೇಶಾದ್ಯಂತ ವಿಶ್ವೇಶ್ವರಯ್ಯ ಪ್ರಸಿದ್ಧರಾಗಿದ್ದರು.

1908ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯ ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು.

ಅವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ 'ಸರ್' ಪದವಿಯನ್ನು ನೀಡಿತು. 1955ರಲ್ಲಿ ಭಾರತ ಸರ್ಕಾರದ ಅತ್ಯುಚ್ಛ ಗೌರವವಾದ ಭಾರತ ರತ್ನ ಲಭಿಸಿತ್ತು.

ವೆಬ್ದುನಿಯಾವನ್ನು ಓದಿ