ಬೆಂಗಳೂರು: ಹೊಸ ವರ್ಷ 2025 ರ ಬಗ್ಗೆ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಲಾಭವಾಗಲಿದೆ ಇಲ್ಲಿದೆ ವಿವರ.
2024 ರ ಅಂತ್ಯಕ್ಕೆ ಜಿಡಿಪಿ ಕೊಂಚ ಇಳಿಕೆಯಾಗಿರುವುದು ಷೇರು ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇದರಿಂದಾಗಿ 2025 ರ ಆರಂಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಳಿತ ನಿರೀಕ್ಷಿಸಬಹುದಾಗಿದೆ. ಈ ವರ್ಷದ ಕೊನೆಯಲ್ಲೂ ಷೇರು ಮಾರುಕಟ್ಟೆ ಹೇಳಿಕೊಳ್ಳುವಂತಹ ಜಿಗಿತ ಕಂಡಿಲ್ಲ.
ಹೀಗಾಗಿ ಮುಂದಿನ ವರ್ಷ ಹೂಡಿಕೆ ಮಾಡುವ ಮೊದಲು ಯಾವ ಕ್ಷೇತ್ರ ಲಾಭಕರ ಎಂದು ಲೆಕ್ಕಾಚಾರ ಹಾಕಿಯೇ ಮುಂದುವರಿಯುವುದು ಉತ್ತಮ. ಮಾರುಕಟ್ಟೆ ತಜ್ಞರ ಪ್ರಕಾರ ಮುಂದಿನ ವರ್ಷ ಆರಂಭದಲ್ಲಿ ಇಳಿಕೆಯಿದ್ದರೂ ಬಳಿಕ ಚೇತರಿಕೆ ಕಂಡುಬರಬಹುದು.
ಅದರಲ್ಲೂ ವಿಶೇಷವಾಗಿ ಖಾಸಗಿ ಬ್ಯಾಂಕ್, ಎಫ್ಎಂಸಿಜಿ, ಟೆಲಿಕಾಂ ಉದ್ಯಮ, ಸಿಮೆಂಟ್ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಲಾಭ ನಿರೀಕ್ಷಿಸಬಹುದಾಗಿದೆ. ಈ ವರ್ಷ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮ್ಯೂಚುವಲ್ ಫಂಡ್ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದರೆ ಅಲ್ಲಿಯೂ ಹೂಡಿಕೆ ಮಾಡಬಹುದು. ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ರಿಟರ್ನ್ಸ್ ಗೆ ಕೆಲವು ಸಮಯ ಕಾಯಬೇಕಾದೀತು.
ಚಿನ್ನ, ರಿಯಲ್ ಎಸ್ಟೇಟ್ ಲಾಭದಾಯಕವಾಗಲಿದೆ
ಚಿನ್ನಕ್ಕೆ ಹೂಡಿಕೆ ಮಾಡುವುದೂ ಲಾಭದಾಯಕವಾಗಲಿದೆ. ಯಾಕೆಂದರೆ ಹಣದುಬ್ಬರದ ಸಂದರ್ಭದಲ್ಲಿಯೂ ನಮ್ಮ ಕೈ ಹಿಡಿಯುವುದು ಚಿನ್ನವೇ ಆಗಿದೆ. ಇನ್ನು ಕಳೆದ ಕೆಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮ ಲಾಭದಾಯಕವಾಗಿದೆ. ಜನರ ಬೇಡಿಕೆಯನ್ನು ಪರಿಗಣಿಸಿದರೆ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಲಾಭಕರವಾಗಲಿದೆ.