ಕ್ಲಾಸಿಕ್ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಅವೆಂಜರ್‌

ಗುರುಮೂರ್ತಿ

ಬುಧವಾರ, 10 ಜನವರಿ 2018 (18:20 IST)
ಭಾರತದಲ್ಲಿ ತನ್ನ ನೂತನ ತಂತ್ರಜ್ಞಾನ ವಿನ್ಯಾಸ ಹಾಗೂ ದರಗಳಿಂದ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಬಜಾಜ್ ಕಂಪನಿಯು ಇದೀಗ ಹೊಸ ವರ್ಷಕ್ಕೆ ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿರುವ ಕೆಲವು ಬೈಕ್‌ಗಳ ವಿನ್ಯಾಸವನ್ನು ಮಾರ್ಪಡಿಸಿ ಮಾರುಕಟ್ಟೆಗೆ ಬಿಡಲು ಮುಂದಾಗಿದೆ.

ಈಗಾಗಲೇ ಬಜಾಜ್ ಡಿಸ್ಕವರ್ 110 ಅನ್ನು ಬಿಡುಗಡೆ ಮಾಡಿರುವ ಕಂಪನಿ ತನ್ನ ಬಹು ಬೇಡಿಕೆಯ ಅವೆಂಜರ್ ಆವೃತ್ತಿಯನ್ನು ಮಾರ್ಪಡಿಸಲು ಮುಂದಾಗಿದ್ದು ಅದರ ವೈಶಿಷ್ಟ್ಯಗಳು ಏನೆಂಬುದು ನಿಮಗಾಗಿ ಇಲ್ಲಿದೆ.
 
ಭಾರತದ ಮಾರುಕಟ್ಟೆಯಲ್ಲಿ ಬಜಾಜ್ ಬೈಕ್‌ಗಳ ಬೇಡಿಕೆ ಹೆಚ್ಚುತ್ತಿದ್ದು, ಗ್ರಾಹಕರು ಮತ್ತು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಾಗೂ ಇತ್ತೀಚಿನ ಟ್ರೆಂಡ್ ಅನ್ನು ಗಮನದಲ್ಲಿರಿಸಿಕೊಂಡು ಬಜಾಜ್ ತನ್ನ ಬೈಕ್‌ಗಳನ್ನು ರೂಪಾಂತರ ಮಾಡುತ್ತಿದ್ದು, 2018 ರ ಫೆಬ್ರುವರಿ ಮೊದಲ ವಾರ ಇಲ್ಲವೇ ಕೊನೆಯ ವಾರದಲ್ಲಿ ನವೀಕರಿಸಲಾದ ಅವೆಂಜರ್ 220 ಸ್ಟ್ರೀಟ್ ಮತ್ತು ಕ್ರೂಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ಹೊಂದಿದೆ.
 
ಅವೆಂಜರ್ ಸ್ಟ್ರೀಟ್ ಮತ್ತು ಕ್ರೂಸ್ ಎರಡೂ ಬೈಕ್‌ಗಳ ಗ್ರಾಫಿಕ್ಸ್‌ಗಳಲ್ಲಿ ಹಲವು ಮಾರ್ಪಾಡುಗಳನ್ನು ನಾವು ಈ ಹೊಸ ಬೈಕ್‌ನಲ್ಲಿ ಕಾಣಬಹುದಾಗಿದ್ದು, ಯಾಂತ್ರಿಕ ಅಂಶಗಳು ಹಳೆಯ ಆವೃತ್ತಿಯ ಬೈಕ್‌ಗಳನ್ನು ಹೋಲುತ್ತವೆ ಎನ್ನಲಾಗಿದೆ. ಹೊಸ ಅವೆಂಜರ್ ಸರಣಿಗಳಲ್ಲಿ ಆಧುನಿಕ ರೀತಿಯ ಡಿಜಿಟಲ್ ಕ್ಲಸ್ಟರ್‌ ಉಪಕರಣವನ್ನು ಅಳವಡಿಸಿದ್ದು, ಇದು ನೋಡಲು ತುಂಬಾ ಆಕರ್ಷಣಿಯವಾಗಿದೆ. ಅಲ್ಲದೇ ಎರಡು ಮಾದರಿ ಬೈಕ್‌ಗಳ ಇಂಧನ ಟ್ಯಾಂಕ್‌ನಲ್ಲಿ ಗ್ರಾಫಿಕ್ಸ್‌ ಅನ್ನು ಬದಲಾಯಿಸಿದ್ದು ಹೊಸ ರೀತಿಯ ಗ್ರಾಫಿಕ್ಸ್‌ಗಳು ಬೈಕ್‌ಗೆ ಟ್ರೆಂಡ್ ಲೂಕ್ ನೀಡಿದೆ.
ಅಲ್ಲದೇ ಮೊದಲಿನ ಅವೆಂಜರ್‌ ಬೈಕ್ ಹ್ಯಾಂಡಲ್ ಬಾರ್ ಅನ್ನು ಬದಲಾಯಿಸಿದ್ದು, ಸುಜುಕಿ ಇಂಟ್ರುಡರ್ ಮಾದರಿಯ ಹ್ಯಾಂಡಲ್ ಬಾರ್‌ ಅನ್ನು ತನ್ನ ಹೊಸ ಆವೃತ್ತಿಯ ಬೈಕ್‌ಗಳಲ್ಲಿ ಕಂಪನಿ ಅಳವಡಿಸಿದೆ. ಇದಲ್ಲದೇ ಹೆಡ್ ಲ್ಯಾಂಪ್‌ನಲ್ಲಿ ಎಲ್‌ಇಡಿ ಟೈಲ್ ಲೈಟ್ ಅನ್ನು ಇದು ಹೊಂದಿದ್ದು, ಪರಿಷ್ಕರಿಸಿದ ಇಂಧನ ಟ್ಯಾಂಕ್ ಹಾಗೂ ಕ್ಲಾಸಿಕ್ ನೋಟದೊಂದಿಗೆ ಗ್ರಾಹಕರನ್ನು ಸೆಳೆಯುವುದರಲ್ಲಿ ಸಂಶಯವೇ ಇಲ್ಲ.
 
ಈಗಾಗಲೇ ಮಾರುಕಟ್ಟೆಯಲ್ಲಿರುವ 150 ಸಿಸಿ ಮತ್ತು 220 ಸಿಸಿ ಅವೆಂಜರ್ ಬೈಕ್‌ಗಳ ಎಂಜಿನ್ ಅನ್ನು ನವೀಕರಿಸಿದ ಬೈಕ್‌ಗಳಲ್ಲಿ ಬಳಸಲಾಗಿದ್ದು ಎಂಜಿನ್‌ಗಳಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಿಲ್ಲ ಆದರೆ ಇದರ ಹೊರನೋಟವು ಹಳೆಯ ಬೈಕ್‌ಗೆ ಹೋಲಿಸಿದಲ್ಲಿ ತುಂಬಾನೇ ಭಿನ್ನವಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಇದರ ಬೆಲೆಯು ಈ ಮಾದರಿಯ ಬೇರೆ ಕಂಪನಿ ಬೈಕ್‌ಗಳಿಗೆ ಹೋಲಿಸಿದಲ್ಲಿ ತುಂಬಾನೇ ಕಡಿಮೆ ಇದ್ದು, ಹೊಸ ಮಾದರಿಯ ಅವೆಂಜರ್ ಬೈಕ್‌ಗಳಾದ 150 ಸಿಸಿ ಆವೃತ್ತಿಗೆ ರೂ.81,485 ಮತ್ತು 220 ಆವೃತ್ತಿಗೆ ರೂ. 93,000 ಇರಬಹುದು ಎಂದು ಅಂದಾಜಿಸಲಾಗಿದೆ.
 
ವಾಹನ ಕ್ಷೇತ್ರದಲ್ಲಿ ರೂಪಾಂತರಗಳು ಸಾಮಾನ್ಯವಾಗಿದ್ದು, ಅದರಲ್ಲೂ ಪೈಪೋಟಿ ಎದುರಾದಾಗ ಗ್ರಾಹಕರನ್ನು ತನ್ನತ್ತ ಸೆಳೆಯುಲು ಕಂಪನಿಗಳು ಈ ತರಹದ ಮಾರ್ಪಾಡುಗಳನ್ನು ಮಾಡುತ್ತಿರುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವೆಂಜರ್ ಬೈಕ್‌ಗೆ ಯಾವುದೇ ಪ್ರತಿಸ್ಫರ್ಧಿ ಬೈಕ್ ಇರಲಿಲ್ಲ ಆದರೆ ಇದೀಗ ಬಿಡುಗಡೆಗೊಂಡಿರುವ ಸುಜುಕಿ ಇಂಟ್ರುಡರ್ 150 ಬೈಕ್ ಈ ಬೈಕ್‌ಗೆ ಬಾರಿ ಪೈಪೋಟಿ ನೀಡುತ್ತಿದೆ. ಹಾಗಾಗೀ ಅವೆಂಜರ್‌ ಹೊಸ ಲೂಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಪ್ರತಿಸ್ಫರ್ಧಿ ಬೈಕ್‌ಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ