ಸೆಲೆಬ್ರಿಟಿ ಹಾಗೂ ಕಂಪೆನಿಗಳು ತಪ್ಪು ಜಾಹೀರಾತು ನೀಡಿದರೆ ಶಿಕ್ಷೆ ಖಚಿತ
ಶುಕ್ರವಾರ, 9 ಆಗಸ್ಟ್ 2019 (08:58 IST)
ನವದೆಹಲಿ : ಜನರನ್ನು ದಿಕ್ಕು ತಪ್ಪಿಸುವಂತಹ ಜಾಹೀರಾತುಗಳನ್ನು ಮಾಡಿದರೆ , ಅದರಲ್ಲಿ ನಟಿಸಿದ ಸೆಲೆಬ್ರಿಟಿ ಹಾಗೂ ಕಂಪೆನಿ ಇಬ್ಬರಿಗೂ ಶಿಕ್ಷೆ ವಿಧಿಸುವ ಗ್ರಾಹಕ ರಕ್ಷಣಾ ಮಸೂದೆ 2019 ನ್ನು ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕಾರ ಮಾಡಲಾಗಿದೆ.
ಇದರ ಪ್ರಕಾರ ಜನರನ್ನು ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪ್ರಚಾರ ಮಾಡಿದ್ದಕ್ಕೆ ಸೆಲೆಬ್ರಿಟಿ ಹಾಗೂ ಕಂಪೆನಿಗಳಿಗೆ 10 ಲಕ್ಷದವರೆಗೆ ದಂಡ ಹಾಗೂ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಅಲ್ಲದೇ ಈ ತಪ್ಪು ಪುನರಾವರ್ತನೆಯಾದರೆ 50 ಲಕ್ಷದವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿರುತ್ತದೆ. ಹಾಗೇ ಸೆಲೆಬ್ರಿಟಿಗಳು 1ರಿಂದ 3 ವರ್ಷದವರೆಗೆ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದಂತೆ ನಿರ್ಬಂಧ ವಿಧಿಸಲು ಸಾಧ್ಯವಾಗುತ್ತದೆ.
ಈ ಮಸೂದೆಯಡಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಸ್ಥಾಪಿಸಲಾಗುತ್ತದೆ. ಒಂದು ವೇಳೆ ಗ್ರಾಹಕರಿಗೆ ಕಂಪೆನಿಗಳು ಜಾಹೀರಾತಿನ ಮೂಲಕ ವಂಚಿಸುತ್ತಿರುವುದು ತಿಳಿದುಬಂದರೆ ಅದನ್ನು ತಪಾಸಣೆ ಮಾಡಲು ಮಹಾ ನಿರ್ದೇಶಕರು ಇರುತ್ತಾರೆ, ಅವರು ಕಂಪೆನಿ ಮತ್ತು ಸೆಲೆಬ್ರಿಟಿಗಳ ಮೇಲೆ ದಂಡ ವಿಧಿಸುತ್ತಾರೆ.