ನಿತ್ಯದ ವ್ಯವಹಾರಕ್ಕೆ ಹೆಚ್ಚು ಹಣವಿರುವ ಖಾತೆ ಬಳಸಬೇಡಿ! ಯಾಕೆ ಇಲ್ಲಿದೆ ವಿವರ

Krishnaveni K

ಸೋಮವಾರ, 12 ಫೆಬ್ರವರಿ 2024 (11:15 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ವ್ಯವಹಾರ ಜನಪ್ರಿಯವಾಗಿದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ ಎಂದು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಪಾವತಿ ಮಾಡುತ್ತೇವೆ.

ಸಣ್ಣ ಕಿರಾಣಿ ಅಂಗಡಿ, ತಳ್ಳು ಗಾಡಿಯಿಂದ ಹಿಡಿದು, ಮಾಲ್, ಜ್ಯುವೆಲ್ಲರಿಯಂತಹ ದೊಡ್ಡ ಶಾಪಿಂಗ್ ಸೆಂಟರ್ ಗೆ ತೆರಳಿದರೂ ನಮಗೆ ಹಣ ನಗದಿನ ರೂಪದಲ್ಲಿ ತೆಗೆದುಕೊಂಡು ಹೋಗುವ ಅಭ್ಯಾಸವೇ ಇಲ್ಲ. ಅಲ್ಲೇ ಇರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಥಟ್ಟಂತ ಸುಲಭವಾಗಿ ಪೇಮೆಂಟ್ ಮುಗಿಸಿ ಬಿಡುತ್ತೇವೆ. ಎಲ್ಲಿ ನೋಡಿದರೂ ಆನ್ ಲೈನ್ ಪೇಮೆಂಟ್ ಮಾಡುವ ಪರಿಸ್ಥಿತಿಯಿದೆ. ಒಂದು ರೀತಿಯಲ್ಲಿ ಇದು ನಮ್ಮ ವ್ಯವಹಾರವನ್ನು ಸುಲಭವಾಗಿಸಿದೆ. ಆದರೆ ಇನ್ನೊಂದೆಡೆ ಇದರಲ್ಲಿ ಕೆಲವು ಅಪಾಯಗಳೂ ಇವೆ.

ಹೀಗಾಗಿ ನೀವು ಆನ್ ಲೈನ್ ಪಾವತಿಗೆ ನಿಮ್ಮ ಹೆಚ್ಚು ಹಣವಿರುವ ಮುಖ್ಯ ಬ್ಯಾಂಕ್ ಖಾತೆಯನ್ನು ಬಳಸಬೇಡಿ. ಸಣ್ಣ ಮೊತ್ತದ ಹಣವಿರುವ ಬ್ಯಾಂಕ್ ಖಾತೆಯನ್ನು ಆನ್ ಲೈನ್ ಪಾವತಿ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮಾಡುವ ಹಣಕಾಸಿನ ವ್ಯವಹಾರಕ್ಕೆ ಬಳಸಿ.

ವಂಚಕರ ಹಾವಳಿ ಹೆಚ್ಚುತ್ತಿದೆ ಹುಷಾರ್
ಸೌಕರ್ಯ ಹೆಚ್ಚಾದಂತೆ ಅನಾನುಕೂಲಗಳೂ ಇವೆ. ಅದೇ ರೀತಿ ಸುಲಭವಾಗಿ ಆನ್ ಲೈನ್ ಪಾವತಿ ಮಾಡುವುದೇನೋ ನಿಜ. ಆದರೆ ಇತ್ತೀಚೆಗಿನ ದಿನಗಳಲ್ಲಿ ಆನ್ ಲೈನ್ ಮೂಲಕವೇ ನಿಮ್ಮ ಹಣಕ್ಕೆ ಕನ್ನ ಹಾಕುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹ್ಯಾಕರ್ ಗಳು, ಆನ್ ಲೈನ್ ವಂಚಕರಿಗೆ ನಿಮ್ಮ ಹಣವನ್ನು ಎಗರಿಸಲು ಕ್ಷಣ ಮಾತ್ರ ಸಾಕು. ಮುಖ್ಯ ಖಾತೆಯನ್ನು ಆನ್ ಲೈನ್ ಬಳಕೆಗೆ ಬಳಸಿದಾಗ ಭಾರೀ ಮೊತ್ತದ ಹಣ ಕಳೆದುಕೊಳ್ಳಬೇಕಾಗುತ್ತದೆ.

ಅಷ್ಟೇ ಅಲ್ಲ, ಹೆಚ್ಚು ಹಣವಿರುವಾಗ ಖರ್ಚು ಮಾಡಲೂ ಧಾರಾಳತನ ತೋರುತ್ತೇವೆ. ಇದರಿಂದ ನಿಮ್ಮ ಜೇಬಿಗೆ ನೀವೇ ಕನ್ನ ಹಾಕಿಕೊಂಡಂತೆ. ಆನ್ ಲೈನ್ ಪಾವತಿಯಲ್ಲಿ ನೋಟು ಎಷ್ಟು ಖರ್ಚಾಯಿತು ಎಂಬುದು ನಿಮಗೇ ಗೊತ್ತೇ ಆಗಲ್ಲ. ಆಗ ಖಾತೆಯಲ್ಲಿರುವ ಹಣ ನೀರಿನಂತೆ ಖರ್ಚಾಗಿ ಕೊನೆಗೆ ಮೇಲೆ ನೋಡುವ ಪರಿಸ್ಥಿತಿ ಎದುರಾದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ