ಚಿನ್ನ ಷೇರು ಮಾರುಕಟ್ಟೆ: ಹೂಡಿಕೆ ಮಾಡಲು ಯಾವುದು ಸೂಕ್ತ ತಿಳಿಯಿರಿ

Krishnaveni K

ಬುಧವಾರ, 31 ಜನವರಿ 2024 (10:50 IST)
ಬೆಂಗಳೂರು: ಬಹುತೇಕರಿಗೆ ಹೂಡಿಕೆ ಮಾಡಲು ಯಾವ ಮಾರ್ಗ ಸೂಕ್ತ ಎಂಬ ಕನ್ ಫ್ಯೂಷನ್ ಬರುತ್ತದೆ. ಅದರಲ್ಲೂ ಚಿನ್ನ ಖರೀದಿ ಮಾಡಬೇಕೋ, ಷೇರು ಮಾರುಕಟ್ಟೆ ನೋಡಬೇಕೋ ಎಂಬ ಜಿಜ್ಞಾಸೆಯಿರುತ್ತದೆ.

ಚಿನ್ನ ವರ್ಸಸ್ ಷೇರು ಮಾರ್ಕೆಟ್
ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಇರುವ ವಿಧಾನಗಳಲ್ಲಿ ಇವೆರಡು ಪ್ರಮುಖವಾದುದು. ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿದರೆ ಮತ್ತೆ ಕೆಲವರು ಬ್ಯುಸಿನೆಸ್ ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇದು ಎರಡರಲ್ಲಿಯೂ ಲಾಭ-ನಷ್ಟ ಇದ್ದೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹಾಕಲು ನಿಮಗೆ ಮಾರುಕಟ್ಟೆ ಏರಿಳಿತದ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದಿದ್ದರೆ ಯಾವ ರೀತಿ ಮಾಡಬೇಕು, ಎಲ್ಲಿ ಇಟ್ಟುಕೊಳ್ಳುವುದು ಎಂಬ ಖಚಿತತೆಯಿರಬೇಕು.

ಚಿನ್ನದಿಂದ ಲಾಭಗಳು ಮತ್ತು ಕೊರತೆಗಳು
ಮಹಿಳೆಯರು ಆಭರಣ ಪ್ರಿಯರು. ಹೀಗಾಗಿ ಅವರಿಗೆ ಚಿನ್ನ ಖರೀದಿ ಮಾಡಲು ಹಣ ಹೊಂದಿಸುವುದೇ ದೊಡ್ಡ ತಲೆನೋವು ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ನಮ್ಮಲ್ಲಿರುವ ಉಳಿತಾಯದ ಹಣದಿಂದ ಚಿನ್ನ ಖರೀದಿಸಿಟ್ಟುಕೊಂಡರೆ ಅದು ಎಂದೆಂದಿಗೂ ಲಾಭಕರ ಆಸ್ತಿಯಾಗುತ್ತದೆ. ಆದರೆ ಚಿನ್ನ ಖರೀದಿ ಮಾಡುವಾಗ 916 ಹಾಲ್ ಮಾರ್ಕ್ ಇರುವ ಚಿನ್ನವನ್ನೇ ಖರೀದಿ ಮಾಡಬೇಕು. ಆಗ ನೀವು ಎಷ್ಟೇ ಸಮಯವಾಗಿದ್ದರೂ ಅಂದಿನ ಬೆಲೆಯೇ ನಿಮಗೆ ಸಿಗುತ್ತದೆ. ಇನ್ನು, ಅಗತ್ಯ ಬಂದಾಗ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವ ಎಷ್ಟೋ ಸೌಲಭ್ಯಗಳು ನಮ್ಮ ಮುಂದಿದೆ.

ಆದರೆ ಚಿನ್ನ ಖರೀದಿ ಮಾಡುವಾಗ ಆಭರಣಗಳ ಬದಲು ಬಿಸ್ಕತ್ ಅಥವಾ ಕಾಯಿನ್ ರೂಪದಲ್ಲಿ ಖರೀದಿ ಮಾಡಿಟ್ಟುಕೊಳ್ಳಿ. ಆಭರಣ ಮಾಡುವಾಗ ಸಹಜವಾಗಿಯೇ ಮಜೂರಿ ವೆಚ್ಚ ಎಲ್ಲ ಸೇರಿ ನೀವು ಒಂದಷ್ಟು ದುಡ್ಡು ಹೆಚ್ಚು ಹಾಕಬೇಕಾಗಬಹುದು. ಇನ್ನು, ಚಿನ್ನವನ್ನು ಹಾಗೆಯೇ ಮನೆಯಲ್ಲಿಟ್ಟುಕೊಳ್ಳುವ ಬದಲು ಅದನ್ನು ಬ್ಯಾಂಕ್ ಲಾಕರ್ ನಲ್ಲಿಟ್ಟರೆ ಅದರ ನಿರ್ವಹಣೆಗೆಂದೇ ನೀವು ಒಂದಷ್ಟು ಖರ್ಚು ಮಾಡಬೇಕಾಗುತ್ತದೆ.

ಷೇರು ಮಾರುಕಟ್ಟೆ
ಇಂದಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವವರು ಅನೇಕರಿರುತ್ತಾರೆ. ಸಣ್ಣ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದವರೆಗೆ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹಾಕುವವರಿರುತ್ತಾರೆ. ಸಣ್ಣ ಮೊತ್ತ ಬಂಡವಾಳ ಹಾಕಿ ಕೋಟಿಗಟ್ಟಲೆ ಲಾಭ ಪಡೆದ ಜಾಣರೂ ಇದ್ದಾರೆ. ಇಂದು ದುಡ್ಡು ಡಬಲ್ ಮಾಡುವ ಸುಲಭ ಮಾರ್ಗವಿದೆ ಎಂದಾದರೆ ಅದು ಷೇರು ಮಾರುಕಟ್ಟೆ.

ಆದರೆ ಇದರಲ್ಲಿ ಹೂಡಿಕೆ ಮಾಡುವಾಗ ನಮಗೆ ಮಾರುಕಟ್ಟೆ ಬಗ್ಗೆ ತಿಳುವಳಿಕೆ ಬೇಕಾಗುತ್ತದೆ. ಆಗಾಗ ಮಾರುಕಟ್ಟೆಯಲ್ಲಿನ ಏರಿಳಿತದ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಇಲ್ಲದೇ ಹೋದರೆ ಹಾಕಿದ ಮೊತ್ತವೂ ಬಾರದೇ ನಷ್ಟ ಅನುಭವಿಸುವವರೂ ಇದ್ದಾರೆ. ಹಿಂದೆ ಮುಂದೆ ನೋಡದೇ ಯಾವುದೋ ಕಂಪನಿಯ ಷೇರು ಪಡೆದು ಕೈ ಸುಟ್ಟುಕೊಳ‍್ಳುವ ಪರಿಸ್ಥಿತಿಯಾಗಬಾರದು. ಇದಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬದಲು ಅದರ ಆಳಗಲವನ್ನು ತಿಳಿದು ನಿರ್ಧಾರಕ್ಕೆ ಬರುವುದು ಸೂಕ್ತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ