ಹೊಸ ವೈಶಿಷ್ಯತೆಯೊಂದಿಗೆ ಲಗ್ಗೆ ಇಟ್ಟ ಹೋಂಡಾ ಏವಿಯೇಟರ್...

ಶುಕ್ರವಾರ, 27 ಜುಲೈ 2018 (16:45 IST)
ಜಪಾನ್‌ನ ದ್ವೀಚಕ್ರ ತಯಾರಿಕಾ ಸಂಸ್ಥೆಯಾದ ಹೋಂಡಾ ತನ್ನ ಗ್ರಾಹಕರಿಗೋಸ್ಕರ ಇಂದಿನ ಬೇಡಿಕೆಗೆ ಅನುಗುಣವಾಗಿ 2018 ರ ಆವೃತ್ತಿಯ ಹೊಸ ತಲೆಮಾರಿನ ಹೋಂಡಾ ಏವಿಯೇಟರ್ ಅನ್ನು ಬಿಡುಗಡೆ ಮಾಡಿದ್ದು, ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಅದಕ್ಕೆ ಕಾರಣವು ಇದೆ ಈಗ ಚಾಲನೆಯಲ್ಲಿರುವ ಸ್ಕೂಟರ್‌ಗಳಿಗೆ ಹೋಲಿಸಿದಲ್ಲಿ ಇದರ ಬೆಲೆ ತುಂಬಾ ಕಡಿಮೆಯಿದ್ದು ದೆಹಲಿ ಎಕ್ಸ್‌ ಶೋರೂಂನ ಪ್ರಕಾರ ರೂ 55157 ಎಂದು ಹೇಳಲಾಗಿದೆ.
ಈಗಾಗಲೇ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿರುವ ಈ ಸ್ಕೂಟರ್ 3  ರೂಪಾಂತರಗಳಲ್ಲಿ ಲಭ್ಯವಿದೆ ಮೊದಲನೆಯದು ಸ್ಟ್ಯಾಂಡರ್ಡ್, ಎರಡನೆಯದು ಆಲೋಯ್ ಡ್ರಮ್ ಮತ್ತು ಮೂರನೆಯದು ಆಲೋಯ್ ಡಿಲೆಕ್ಸ್, ಅಷ್ಟೇ ಅಲ್ಲ ಇದರ ವಿನ್ಯಾಸವು ಉತ್ತಮವಾಗಿದ್ದು ಎಲ್‌ಇಡಿ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಕೂಡಾ ಇದರಲ್ಲಿ ಅಳವಡಿಸಲಾಗಿದೆ.
ಇದರ ಹಳೆಯ ಮಾದರಿಗೆ ಹೋಲಿಸಿದರೆ ಮುಂಭಾಗದ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಹೆಡ್‌ಲ್ಯಾಂಪ್ ಮತ್ತು ಪೊಸಿಶನ್ ಲ್ಯಾಂಪ್‌ಗಳು, ಪೋರ್‌ ಇನ್ ಒನ್ ಲಾಕ್, ಸೀಟು ತೆರೆಯುವ ಸ್ವೀಚ್, ಮುಂಭಾಗದ ಮತ್ತು ಹಿಂಭಾಗದ ಹುಕ್‌ಗಳು ನವೀಕರಣಗೊಂಡಿದೆ ಅಲ್ಲದೇ ಮೆಟಲ್ ಮಪ್ಲರ್ ಪ್ರೊಜೆಕ್ಟರ್ ಈ ಸ್ಕೂಟರ್‌ನ ಮೆರಗನ್ನು ಹೆಚ್ಚಿಸಿದೆ ಎಂದೇ ಹೇಳಬಹುದು.
 
ಹೊಸದಾದ ಏವಿಯೇಟರ್ ಪರ್ಲ್ ಸ್ಪಾರ್ಟಾನ್ ರೆಡ್‌‌ ರೀತಿಯ ಹೊಸ ಬಣ್ಣದಲ್ಲೂ ಲಭ್ಯವಿದೆ ಅಷ್ಟೇ ಅಲ್ಲ ಈಗಾಗಲೇ ಅಸ್ಥಿತ್ವದಲ್ಲಿರುವ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಸೆಲೆನ್ ಸಿಲ್ವರ್ ಮೆಟಾಲಿಕ್ ಮತ್ತು ಪರ್ಲ್ ಅಮೇಜಿಂಗ್ ವೈಟ್ ಕೂಡಾ ಸೇರಿಕೊಂಡಿವೆ. 
 
ಯಾಂತ್ರಿಕವಾಗಿ ಹೇಳುವುದಾದರೆ 2018 ರ ಹೊಸ ಏವಿಯೇಟರ್‌ನಲ್ಲ ಯಾವುದೇ ಬದಲಾವಣೆಯಾಗಿಲ್ಲ. ಇದು ಹಿಂದಿನಂತೆಯೇ ಇದ್ದು 109 ಸಿಸಿ ಸಿಂಗಲ್ ಸಿಲೆಂಡರ್, 8bhp ಮತ್ತು 9Nm ಟಾರ್ಕ್‌ ಶಕ್ತಿಯನ್ನು ಉತ್ಪಾದಿಸುವ ಏರ್ ಕೂಲ್ ಇಂಜಿನ್ ನಾವು ಕಾಣಬಹುದಾಗಿದೆ. ಅಷ್ಟೇ ಅಲ್ಲ ಇದು ಬಿಎಸ್‌4 ಮಾದರಿಯ ಇಂಜಿನ್ ಆಗಿದ್ದು ವಿ-ಮ್ಯಾತಿಕ್ ಗೇರ್‍‍‍ಬಾಕ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇನ್ನು ಸಸ್ಪೆಶನ್‌ಗಳ ಕುರಿತು ಹೇಳುವುದಾದರೆ ಮುಂಬಾಗದಲ್ಲಿ ಟೆಲಿಸ್ಕೋಪಿಕ್ ಪೋರ್ಕ್ಸ್‌ಗಳನ್ನು ಇದು ಹೊಂದಿದ್ದು ಹಿಂಬಾಗದಲ್ಲಿ ರಿಯರ್ ಮೊನೋ ಶಾಕ್ಸ್‌ಗಳಿವೆ.
ಇದು ಗಂಟೆಗೆ 82 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮುಂಬದಿಯಲ್ಲಿ ಮತ್ತು ಹಿಂಬದಿಯಲ್ಲಿ 130ಎಮ್ಎಮ್ ಮತ್ತು 190ಎಮ್ಎಮ್ ಡಿಸ್ಕ್ ಬ್ರೇಕ್ ಸಿಸ್ಟಂ ಅಳವಡಿಸಲಾಗಿದ್ದು, ಟ್ಯೂಬ್‌ಲೆಸ್ ಟಾಯರ್‌ಗಳನ್ನು ಹೊಂದಿದೆ. ಹೊಸದಾಗಿರುವ ಈ ಏವಿಯೇಟರ್‌ನ ಉದ್ದವು 1802ಎಮ್ಎಮ್ ಮತ್ತು 703ಎಮ್ಎಮ್ ಅಗಲವಿದೆ ಇದರ ಗ್ರೌಂಡ್‌ ಕ್ಲಿಯರೆನ್ಸ್ 145 ಎಮ್‌‌ಎಮ್ ಇದ್ದು 106 ಕಿಲೋ ಭಾರವನ್ನು ಇದು ಹೊಂದಿದೆ ಜೊತೆಗೆ ಇದರಲ್ಲಿ 6 ಲೀಟರ್ ಇಂಧನವನ್ನು ಸಂಗ್ರಹಣೆಯಿದ್ದು ಲೀಟರ್‌ಗೆ 60 ಕಿಲೋ ಮೈಲೇಜ್‌ನ್ನು ಈ ಸ್ಕೂಟರ್ ನೀಡುತ್ತದೆ.
 
ಒಟ್ಟಿನಲ್ಲಿ ಹೊಸ ಬಣ್ಣ ಮತ್ತು ವಿನ್ಯಾಸಗಳಲ್ಲಿ ರೂಪಾಂತರಗೊಂಡಿರುವ ಈ ಬೈಕ್ ಸ್ಕೂಟರ್ ಮಾರಾಟವಲಯದಲ್ಲಿ ಹೊಸ ಸಂಚಲನವನ್ನು ಮೂಡಿಸುವುದರೊಂದಿಗೆ ಗ್ರಾಹಕರ ಮನ ಗೆಲ್ಲುವುದೇ ಎಂಬುದು ಸದ್ಯದ ಕೂತುಹಲವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ