ಸುಪ್ರೀಂಕೋರ್ಟ್‌ ತೀರ್ಪಿಗೆ ಸಿಂಗೂರ್‌ ರೈತರ ಸಂತಸ

ಗುರುವಾರ, 1 ಸೆಪ್ಟಂಬರ್ 2016 (18:05 IST)
ಪಶ್ಚಿಮ ಬಂಗಾಳದ ಸಿಂಗನೂರಿನ ಟಾಟಾ ನ್ಯಾನೋ ಘಟಕಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿ ವಿವಾದ ಕುರಿತಂತೆ ಕೋಲ್ಕತಾ ಹೈಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡಿದ್ದ ರೈತರು ಹಾಗೂ ಅವರ ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. 
 
ಮುಂಜಾನೆಯಿಂದ ನೂರಾರು ರೈತರು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದರು. ಕೋರ್ಟ್‌ನ ತೀರ್ಪು ಹೊರ ಬಿದ್ದಿರುವುದನ್ನು ತಮ್ಮ ಟಿವಿ ಪರದೆಯ ಮೇಲೆ ಕಾಣುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದರು. 
 
ಕೋರ್ಟ್‌ ತೀರ್ಪನ್ನು ಸ್ವಾಗತಿಸಿದ ನೂರಾರು ರೈತ ಕುಟುಂಬಗಳು ಪರಸ್ಪರ ಅಭಿನಂದನೆಗಳನ್ನು ಹಂಚಿಕೊಂಡರು. ಮಹಿಳೆಯರು ಹಾಗೂ ಮಕ್ಕಳು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು. ಹಾಗೂ ಹಸಿರು ಗುಲಾಲ್ ಎರಚಿ ಪರಸ್ಪರ ಸಿಹಿ ಹಂಚಿ ಸಂಭ್ರಮಪಟ್ಟರು. 
 
ಸಂಭ್ರಮಾಚರಣೆಯಲ್ಲಿ ತೊಡಗಿದ್ದ ನೂರಾರು ರೈತರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾವಚಿತ್ರದೊಂದಿಗೆ ಬೃಹತ್ ರ್ಯಾಲಿ ಹಮ್ಮಿಕೊಂಡರು. ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಜಿಂದಾಬಾದ್, ನಾವು ನಿಮಗೆ ಸದಾ ಚಿರಋಣಯಾಗಿರುತ್ತೇವೆ ಎಂಬ ಘೋಷಗಳನ್ನು ಕೂಗಿದರು. 
 
ಇಂದು ನಾವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ವಿಜಯ ಕಂಡಿದ್ದೇವೆ. ದೀದಿಯ ಪರಿಶ್ರಮ ಹಾಗೂ ನಮ್ಮ ನಂಬಿಕೆಯ ಪ್ರತೀಕದ ಅಂತಿಮವಾಗಿ ನಾವು ಗೆಲುವು ಪಡೆದಿದ್ದೇವೆ. ನ್ಯಾಯಾಧೀಕರಣದ ತೀರ್ಪು ನಮಗೆ ಸಂತಸ ತಂದಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.
 
ಟಾಟಾ ಮೋಟರ್ಸ್ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಿಂಗೂರ್‌‌ ಮತ್ತು ಕೋಲ್ಕತ್ತಾ ನಗರದಲ್ಲಿ 26 ದಿನಗಳ ಕಾಲ ನಿರಶನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ