ಮುಂಬೈ: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಂಡಿರುವವರು ಈಗ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆ ಪಾತಾಳ ತಲುಪಿರುವುದಕ್ಕೆ ಕಾರಣವೇನು?
ನಿನ್ನೆ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 657.97 ಪಾಯಿಂಟ್ ಗಳಷ್ಟು ಕುಸಿತವಾಗಿದ್ದರೆ ಎನ್ಎಸ್ ಇ ನಿಫ್ಟಿ 199.60 ಪಾಯಿಂಟ್ ಗಳಷ್ಟು ಕುಸಿತವಾಗಿತ್ತು. ಇದು ಬೆಳಗಿನ ಅವಧಿಯಲ್ಲಿ. ಈ ಟ್ರೆಂಡ್ ನಂತರವೂ ಮುಂದುವರಿದಿದೆ.
ನಿನ್ನೆ ಮಾರುಕಟ್ಟೆ ಕ್ಲೋಸ್ ಆಗುವವರೆಗೂ ಇದೇ ಟ್ರೆಂಡ್ ಮುಂದುವರಿದಿತ್ತು. ಅದರಲ್ಲೂ ಭಾರತೀಯ ರೂಪಾಯಿ ಅಮೆರಿಕಾದ ಡಾಲರ್ ಎದುರು 86.27 ರಷ್ಟು ದಾಖಲೆಯ ಕುಸಿತ ಕಂಡಿತ್ತು. ವರ್ಷಾಂತ್ಯದಲ್ಲಿ ಷೇರು ಮಾರುಕಟ್ಟೆಯಲ್ಲಿನ ಕುಸಿತದ ಟ್ರೆಂಡ್ ಹೊಸ ವರ್ಷದಲ್ಲೂ ಮುಂದುವರಿದಿದೆ.
ಇದು ಷೇರುದಾರರನ್ನು ಚಿಂತೆಗೀಡು ಮಾಡಿದೆ. ಕಳೆದ ಒಂದು ವಾರದಲ್ಲಿ ದಾಖಲೆಯ ಕುಸಿತ ಕಂಡುಬರುತ್ತಿರುವುದು ಹೂಡಿಕೆ ಮಾಡಿದವರಿಗೆ ದೊಡ್ಡ ನಷ್ಟವುಂಟು ಮಾಡುತ್ತಿದೆ. ಇದಕ್ಕೆ ಹಲವು ಕಾರಣಗಳನ್ನು ತಜ್ಞರು ನೀಡುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ವಿಶ್ವದಾದ್ಯಂತ ಎಚ್ಎಂಪಿವಿ ವೈರಸ್ ವಿಚಾರ ದೊಡ್ಡ ಸುದ್ದಿಯಾಗಿತ್ತು. ಬಹುಶಃ ಈ ಕಾರಣಕ್ಕೂ ಷೇರುಮಾರುಕಟ್ಟೆ ಕುಸಿತ ಕಂಡಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರ ಹೊರತಾಗಿ ಲಾಸ್ ಏಂಜಲೀಸ್ ನಲ್ಲಿ ನಡೆದ ಅಗ್ನಿ ಅನಾಹುತವೂ ಸಾಕಷ್ಟು ನಷ್ಟಕ್ಕೆ ಕಾರಣವಾಗಿತ್ತು. ಇದೂ ಷೇರು ಮಾರುಕಟ್ಟೆ ಕುಸಿತ ಕಾಣಲು ಒಂದು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದು ಹೊಡೆತ ನೀಡಿದೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ಐಟಿ ವಲಯ, ಆರೋಗ್ಯ ವಲಯದ ಷೇರುಗಳಲ್ಲಿ ಕೊಂಚ ಚೇತರಿಕೆ ಕಂಡುಬರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಾರೆ. ಆದರೆ ಭಾರತೀಯ ಮಾರುಕಟ್ಟೆಗೆ ಕಳೆದ ಒಂದು ವಾರದಿಂದ ಈ ಮಟ್ಟಿಗೆ ನೇರ ಹೊಡೆತ ಬೀಳುವುದಕ್ಕೆ ನಿಖರವಾಗಿ ಇಂತಹದ್ದೇ ಕಾರಣ ಎಂದು ತಿಳಿಯದೇ ಹೂಡಿಕೆದಾರರು ಕಂಗಾಲಾಗಿದ್ದಾರೆ.