2020 ರ ಕರಾಳತೆಗೆ ಇದುವೇ ಸಾಕ್ಷಿ: ಐದು ತಿಂಗಳಲ್ಲಿ ಜೀವ ಕಳೆದುಕೊಂಡ ಕಲಾವಿದರು ಎಷ್ಟು ಮಂದಿ ಗೊತ್ತಾ?!

ಮಂಗಳವಾರ, 16 ಜೂನ್ 2020 (09:39 IST)
ಬೆಂಗಳೂರು: 2020 ಯಾಕೋ ಸಿನಿಮಾ ರಂಗಕ್ಕಂತೂ ಒಂದಾದ ಮೇಲೊಂದು ಆಘಾತ ನೀಡುತ್ತಿದೆ. ಕೊರೋನಾಘಾತದ ನಡುವೆ ಒಬ್ಬೊಬ್ಬರೇ ಪ್ರತಿಭಾವಂತ ನಟರು ಇದ್ದಕ್ಕಿದ್ದಂತೆ ನಮ್ಮನ್ನು ಅಗಲಿ ಮತ್ತಷ್ಟು ಆಘಾತ ನೀಡಿದ್ದಾರೆ.


ಈ ವರ್ಷ ಆರಂಭವಾಗಿ ಇನ್ನೂ ಐದೂವರೆ ತಿಂಗಳು ಕಳೆದಿದೆಯಷ್ಟೇ. ಅದರಲ್ಲೂ ಏಪ್ರಿಲ್ ನಿಂದ ಇಂದಿನವರೆಗೆ ಸಾಲು ಸಾಲು ನಟ-ನಟಿಯರನ್ನು ಕಳೆದುಕೊಂಡಿದ್ದೇವೆ.

ಏಪ್ರಿಲ್ 6 ರಂದು ಬುಲೆಟ್ ಪ್ರಕಾಶ್ ಬಹುಅಂಗಾಂಗ ವೈಕಲ್ಯದಿಂದ ತೀರಿಕೊಂಡಿದ್ದರು. ಅದಾದ ಬಳಿಕ ಏಪ್ರಿಲ್ 29 ರಂದು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಅಂದರೆ ಮರುದಿನವೇ ರಿಷಿ ಕಪೂರ್ ಇನ್ನಿಲ್ಲವಾದರು.

ಬಳಿಕ ಮೇ 13 ರಂದು ಮೈಕಲ್ ಮಧು ರೂಪದಲ್ಲಿ ಸ್ಯಾಂಡಲ್ ವುಡ್ ಗೆ ಆಘಾತ ಸಿಕ್ಕಿತು. ಇದಾದ ಬಳಿಕ ಟಿವಿ ನಟರಾದ ಪ್ರೇಕ್ಷಾ ಮೆಹ್ತಾ, ಮೆಬಿನ್ ಮೈಕಲ್ ಮನ್ಮೀತ್ ಗ್ರೆವಾಲ್ ಪ್ರಾಣ ಕಳೆದುಕೊಂಡರು.  ಇದರ ನಡುವೆ ಜೂನ್ 1 ರಂದು ಸಂಗೀತ ನಿರ್ದೇಶಕ ವಾಜಿದ್ ಖಾನ್, ಜೂನ್ 4 ರಂದು ನಿರ್ದೇಶಕ ಬಸು ಚಟರ್ಜಿ ಇನ್ನಿಲ್ಲವಾದರು.

ಆದರೆ ಹೆಚ್ಚು ಆಘಾತ ಉಂಟು ಮಾಡಿದ್ದು ಜೂನ್ 7 ರಂದು ಚಿರಂಜೀವಿ ಸರ್ಜಾ ಮತ್ತು ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ಘಟನೆ. ಇವರಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರೆ ಚಿರು ಸರ್ಜಾ ಹಠಾತ್ ಆಗಿ ಹೃದಯಾಘಾತಕ್ಕೊಳಗಾದರು. ಇವರಿಬ್ಬರದೂ ಚಿಕ್ಕ ವಯಸ್ಸು ಎಂಬುದು ಗಮನಿಸಬೇಕಾದ ಅಂಶ. ಈ ಎಲ್ಲಾ ಸರಣಿ ಸಾವಿನ ಬಳಿಕ ಸಾಕಪ್ಪಾ 2020 ರ ಟಿ20 ಗೇಮ್ ಎಂದು ಜನರು ಬೇಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ