ಬೆಂಗಳೂರು: ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಐಹೊಳೆಯ ವಾಸ್ತು ಶಿಲ್ಪಗಳ ನಡುವೆ ಕಂಡುಬರುತ್ತಿರುವ ಬಿರುಕುಗಳನ್ನು ಸರಿಪಡಿಸಿ, ಪಾರಂಪರಿಕ ತಾಣಗಳನ್ನು ರಕ್ಷಿಸುವಂತೆ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರಿಗೆ ನಟ ಅನಿರುದ್ಧ ಮನವಿ ಸಲ್ಲಿಸಿದ್ದಾರೆ.
ಎಚ್ ಕೆ ಪಾಟೀಲ್ ಅವರನ್ನು ಭೇಟಿಯಾದ ನಟ ಅನಿರುದ್ಧ ಜತಕರ ತಾವು ಇತ್ತೀಚೆಗೆ ಐಹೊಳೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶವಾಗಿ ಕಂಡ ಅಲ್ಲಿನ ದುಸ್ಥಿತಿ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಪತ್ರ ಮುಖೇನ ದುರಸ್ಥಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕದ ಅತ್ಯದ್ಭುತ ಶಿಲ್ಪಕಲೆಗಳಲ್ಲಿ ಒಂದಾದ ಐಹೊಳೆಗೆ ಇತ್ತೀಚೆಗೆ ಭೇಟಿ ನೀಡಿದ್ದಾಗ ವಾಸ್ತು ಶಿಲ್ಪಗಳ ನಡುವೆ ಅಲ್ಲಲ್ಲಿ ಬಿರುಕು ಮೂಡಿರುವುದನ್ನು ನೋಡಿ ಮನಸ್ಸಿಗೆ ಬೇಸರವಾಯಿತು. ಇಲ್ಲಿನ ವಾಸ್ತು ಶಿಲ್ಪಗಳು ರೂಪುಗೊಂಡಿರುವುದು ಮರಳುಗಲ್ಲಿನಿಂದ. ಹೀಗಾಗಿ ಕ್ರಮೇಣ ಇದು ಶಿಥಿಲಗೊಳ್ಳುವ ಅಥವಾ ಸೌಂದರ್ಯ ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ಪುರಾತತ್ವ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ನಟ ಅನಿರುದ್ಧ ಮನವಿ ಮಾಡಿದ್ದಾರೆ.
ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲೂ ನಟ ಅನಿರುದ್ಧ ಅವರು ಐಹೊಳೆಯ ಸ್ಥಿತಿಗತಿ ಬಗ್ಗೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಇದನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂದು ಕರೆ ನೀಡಿದ್ದರು. ಇದಕ್ಕೆ ಮೊದಲು ತುಂಗಾ ನದಿಯ ದುಸ್ಥಿತಿ ಬಗ್ಗೆ ಕಳಕಳಿಯಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದರು. ಸ್ವಚ್ಛತೆಯಲ್ಲಿ ನಾನೂ ಸಹಭಾಗಿ ಎಂಬ ಅಭಿಯಾನದ ಮೂಲಕ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿರುವ ನಟ ಅನಿರುದ್ಧ ಈಗ ಐಹೊಳೆಯ ದುಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.