ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ನಟಿ ಛಾಯಾಸಿಂಗ್ ಅವರ ತವರು ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎನ್‌ಜಿಓಎಸ್ ಕಾಲೋನಿ ನಿವಾಸಿ 43 ವರ್ಷದ ಉಷಾ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯಿಂದ ₹ 4 ಲಕ್ಷ ಮೌಲ್ಯದ 66 ಗ್ರಾಂ ಚಿನ್ನ ಮತ್ತು 155 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆ ಆಭರಣವನ್ನು ಬಹುಭಾಷಾ ನಟಿಯೂ ಆಗಿರುವ ಛಾಯಾ ಸಿಂಗ್ ಅವರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಈಚೆಗೆ ಮರಳಿಸಿದರು.
ಎನ್‌ಎಚ್‌ಸಿಎಸ್ ಬಡಾವಣೆಯಲ್ಲಿ ವಾಸವಾಗಿರುವ ಬಹುಭಾಷಾ ನಟಿ ಛಾಯಾ ಸಿಂಗ್ ಅವರ ತಾಯಿ ಚಮನ್ ಲತಾ ಸಿಂಗ್ ಮನೆಯಲ್ಲಿ ಉಷಾ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು. ಏ.13ರಂದು ರೂಮಿನ ಬೀರುವಿನ ಲಾಕರ್‌ನ್ನು ಆರೋಪಿ, ಮುಚ್ಚುತ್ತಿರುವುದನ್ನು ಗಮನಿಸಿದ್ದ ಚಮನ್ ಲತಾ ಸಿಂಗ್, ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಿದ್ದಾರೆ.
ಆಗ ಉಷಾ ತಡಬಡಾಯಿಸಿದ್ದಳು. ಕೊನೆಗೆ ಬೀರು ಪರಿಶೀಲನೆ ನಡೆಸಿದಾಗ ಕೆಲವು ಆಭರಣ ಕಳವಾಗಿದ್ದವು. ಈ ಬಗ್ಗೆ ಚಮನ್ ಲತಾ ಸಿಂಗ್ ಕೊಟ್ಟ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾಡಿದ್ದ ಸಾಲ ತೀರಿಸುವ ಸಲುವಾಗಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.