ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ನಟ ದರ್ಶನ್ ಅವರನ್ನು ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ಇದೀಗ ಸಿಕ್ಕಾ ಮಾಹಿತಿ ಪ್ರಕಾರ ಇನ್ಮುಂದೆ ದರ್ಶನ್ ಭೇಟಿಗೆ ಪತ್ನಿ, ರಕ್ತ ಸಂಬಂಧಿಗಳಿಗೆ ಮತ್ತು ಅವರ ಪರ ವಕೀಲರಿಗಷ್ಟೇ ಅವಕಾಶ ಎನ್ನಲಾಗಿದೆ. ಅದರಂತೆ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ನಟಿಯರು, ನಟರು, ರಾಜಕೀಯ ಮುಖಂಡರು ಭೇಟಿಯಾಗುವಂತಿಲ್ಲ ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ ನೀಡುತ್ತಿರುವ ಫೋಟೋ ವೈರಲ್ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಸೂಚನೆ ನೀಡಿತ್ತು. ಅದರಂತೆ ಪೊಲೀಸ್ ಇಲಾಖೆ ಮೂರು ಪ್ರಕರಣ ದಾಖಲಿಸಿಕೊಂಡು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ವಿಚಾರಣಾಧೀನ ಕೈದಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಕೋರಲಾಯಿತು. ಜಡ್ಜ್ ಅನುಮತಿ ಮೇರೆ ದರ್ಶನ್ ಅವರನ್ನು ಬಳ್ಳಾರಿ ಹಾಗೂ ಇತರ ಕೈದಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಿದೆ. ಅದಲ್ಲದೆ ಬೇರೆ ಕೈದಿಗಳ ಜತೆ ಬೆರೆಯದಂತೆ ಸೂಕ್ತ ಭದ್ರತೆ ನೀಡಲಾಗಿದೆ. ಅದಲ್ಲದೆ ಹೆಚ್ಚಿನ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಕಣ್ಗಾವಳಾಗಿ ಇರಿಸಲಾಗಿದೆ.